

ಬೆಂಗಳೂರು: ಎರಡು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ಗೆ 42ನೇ ಎಸಿಎಂಎಂ ಕೋರ್ಟ್ ಜಾಮೀನು ನೀಡಿದೆ.
3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಿರುವ ಹಿನ್ನೆಲೆ ಜಾಮೀನು ನೀಡಲಾಗಿದ್ದು, 25 ಸಾವಿರ ರೂಪಾಯಿ ಬಾಂಡ್ ಶ್ಯೂರಿಟಿ ಒದಗಿಸಲು ಸೂಚನೆ ನೀಡಿ ನ್ಯಾ.ಜೆ.ಪ್ರೀತ್ ಜಾಮೀನು ಆದೇಶ ಹೊರಡಿಸಿದ್ದಾರೆ.
ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್ಗೆ 10 ಸಾವಿರ ರೂ. ದಂಡ ಹಾಗೂ 2 ತಿಂಗಳು ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ತೀರ್ಪು ಪ್ರಕಟಿಸಿತ್ತು.
2 ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ವಿರುದ್ಧ ಸೋದರ ಸಂಬಂಧಿ ಎಚ್.ಜಿ.ಪ್ರಶಾಂತ್ ಎಂಬುವರು 2019ರ ಅಕ್ಟೋಬರ್ನಲ್ಲಿ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜನಪ್ರತಿನಿಧಿಗಳ ಕಾಯ್ದೆ ಸೆ.125 ಎ ಅಡಿ ಆರೋಪ ಸಾಬೀತಾಗಿದ್ದು, ಶಾಸಕರಿಗೆ ಶಿಕ್ಷೆ ವಿಧಿಸಲಾಗಿತ್ತು.