ಹೆರಿಗೆ ಮಾಡಿಸಿದ ಶಾಸಕ ತಾಯಿಂಸಾಂಗ

MLA ZR Thiamsanga
Published on

ಐಜ್ವಾಲ್​: ಮಿಜೋರಾಂನ ಶಾಸಕ ಝೆಡ್ ಆರ್​ ತಾಯಿಂಸಾಂಗ ಅವರು ಚಂಪಾಯಿ ಜಿಲ್ಲೆಯ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ವೈದ್ಯರಿಲ್ಲದ ಕಾರಣ ಗರ್ಭಿಣಿಯೊಬ್ಬರ ಹೆರಿಗೆ ಮಾಡಿಸಿದ್ದರು. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಶಾಸಕರ ಈ ಕಾರ್ಯವೀಗ ದೇಶದ ಗಮನಸೆಳೆದಿದೆ.

ತಾಯಿಂಸಾಂಗ ಅವರು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು, ಒಬೆಸ್ಟೆಟ್ರಿಕ್ಸ್​ ಮತ್ತು ಗೈನಕಾಲಜಿಯಲ್ಲಿ ಪರಿಣತರು. ಹಿಂದುಳಿದ ಪ್ರದೇಶಕ್ಕೆ ತೆರಳಿದಾಗ ವೈದ್ಯಕೀಯ ತುರ್ತು ಇದ್ದರೆ ಕೂಡಲೇ ಅವರು ಶಾಸಕರೆನ್ನುವುದನ್ನು ಮರೆತು ಡಾಕ್ಟರ್ ಆಗಿ ಕರ್ತವ್ಯಕ್ಕೆ ಇಳಿದುಬಿಡುತ್ತಾರೆ. ಮ್ಯಾನ್ಮಾರ್​ ಗಡಿ ಪ್ರದೇಶಕ್ಕೆ ಸಮೀಪ ಇರುವ ಚಂಪಾಯಿ ನಾರ್ತ್​ನಲ್ಲಿ ಇರುವ ತನ್ನ ವಿಧಾನಸಭಾ ಕ್ಷೇತ್ರ ಭೇಟಿ ವೇಳೆ ಅವರು ಈ ಹೆರಿಗೆ ಮಾಡಿಸಿದ್ದಾರೆ.

ನಾಗೂರ್ ಗ್ರಾಮದ ಸಿ ಲಾಲ್ಹ್​ಮಾಂಗಾಯಿಸಂಗಿ (38) ಅವರ ಎರಡನೇ ಮಗುವಿನ ಹೆರಿಗೆಯನ್ನೇ ತಾಯಿಂಸಾಂಗ ಮಾಡಿಸಿದ್ದು. ಚಂಪಾಯಿ ಹಾಸ್ಪಿಟಲ್​ನ ವೈದ್ಯಕೀಯ ಅಧಿಕಾರಿ ರಜೆಯಲ್ಲಿ ಹೋಗಿದ್ದಾರೆ. ಮಹಿಳೆಯ ಆರೋಗ್ಯ ಪರಿಸ್ಥಿತಿ ಹದಗೆಟ್ಟಿರುವ ಕಾರಣ 200 ಕಿ.ಮೀ. ದೂರದ ಐಜ್ವಾಲ್​ನ ಆಸ್ಪತ್ರೆಗೆ ಹೋಗುವಷ್ಟು ವ್ಯವಧಾನವಿರಲಿಲ್ಲ. ಹೀಗಾಗಿ ಡಾಕ್ಟರ್ ಆಗಿ ನನ್ನ ಕರ್ತವ್ಯವನ್ನು ನಿರ್ವಹಿಸಿದೆ ಎಂದು ತಾಯಿಂಸಾಂಗ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net