ಅನಾರೋಗ್ಯದ ನಡುವೆಯೂ ಶೂಟಿಂಗ್​ ಮಾಡಿದ್ರಂತೆ ಮಿಥುನ್​ ...

Mithun Chakraborty - Final
Published on

ಮುಂಬೈ: ಚಿತ್ರೀಕರಣ ವೇಳೆ ಹೀರೋಗಳಿಗೆ ಸಣ್ಣಗಾಯವಾದರೂ ಶೂಟಿಂಗ್​ ನಿಲ್ಲಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ವಾಡಿಕೆ. ಆದರೆ, ಹಿರಿಯ ನಟ ಮಿಥುನ್​ ಚಕ್ರವರ್ತಿ ಮಾತ್ರ ಅನಾರೋಗ್ಯದ ನಡುವೆಯೂ ಚಿತ್ರೀಕರಣ ಮಾಡಿ, 'ದಿ ಕಾಶ್ಮೀರ್​ ಫೈಲ್ಸ್​' ಚಿತ್ರತಂಡದಿಂದ ಸೈ ಎನಿಸಿಕೊಂಡಿದ್ದಾರೆ.

ವಿಷಯ ಏನೆಂದರೆ, 'ದಿ ಕಾಶ್ಮೀರ್​ ಫೈಲ್ಸ್​' ಚಿತ್ರದ ಚಿತ್ರೀಕರಣ ಮಸ್ಸೂರಿಯಲ್ಲಿ ಇತ್ತೀಚೆಗೆ ನಡೆಯುತ್ತಿತ್ತಂತೆ. ಅಲ್ಲಿ ಒಂದಿಷ್ಟು ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡುವುದಕ್ಕೆ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನಿರ್ಧರಿಸಿದ್ದರಂತೆ. ಈ ಮಧ್ಯೆ, ಮಿಥುನ್​ ಚಕ್ರವರ್ತಿಗೆ ಹೊಟ್ಟೆಯಲ್ಲಿ ಇನ್ಫೆಕ್ಷನ್​ ಆಗಿ ಮೇಲೇಳುವುದಕ್ಕೆ ಸಾಧ್ಯವಾಗಲಿಲ್ಲವಂತೆ.

ಬೇರೆ ಯಾರಾದರೂ ಆಗಿದ್ದರೆ, ಚಿತ್ರೀಕರಣ ನಿಲ್ಲಿಸುತ್ತಿದ್ದರು. ಆದರೆ, ಮಿಥುನ್​ ಮಾತ್ರ ಸ್ವಲ್ಪ ಸಮಯ ರೆಸ್ಟ್​ ತೆಗೆದುಕೊಂಡು ಚಿತ್ರೀಕರಣಕ್ಕೆ ವಾಪಸ್ಸಾದರಂತೆ. ಹಲವು ವರ್ಷಗಳಿಂದ ಮಿಥುನ್​ ಯಾವತ್ತೂ ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿರಲಿಲ್ಲವಂತೆ. ಈಗ ಇದ್ದಕ್ಕಿದ್ದಂತೆ ಹೀಗಾಗಿದ್ದು, ಅವರಿಗೂ ಸಾಕಷ್ಟು ಬೇಸರ ತಂದಿದೆ. 'ನನ್ನಿಂದ ನಿಮಗೆ ತೊಂದರೆಯಾಯ್ತು ...' ಎಂದು ಬೇಸರ ಮಾಡಿಕೊಳ್ಳುತ್ತಲೇ ಅವರು ತಮ್ಮ ಭಾಗದ ಚಿತ್ರೀಕರಣ ಮುಗಿಸಿದರಂತೆ.

ಮಿಥುನ್​ ಅವರ ಕಮಿಟ್​ಮೆಂಟ್​ ನೋಡಿ ಇಡೀ ಚಿತ್ರತಂಡ ದಂಗಾಗಿದೆ. ಈ ಕುರಿತು ಮಾತನಾಡಿರುವ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ, 'ನಾನೂ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಆದರೆ, ಇಂದಿನ ತಲೆಮಾರಿನ ಯಾವ ನಟ ಸಹ ಅನಾರೋಗ್ಯದ ನಡುವೆಯೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದನ್ನು ನಾನು ನೋಡಲಿಲ್ಲ. ಅದೇ ಕಾರಣಕ್ಕೆ ಅವರು ಸೂಪರ್​ಸ್ಟಾರ್​ ಆಗಿದ್ದು' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net