ಟೈಟಲ್​ ಏನೋ ಹಳೇದು, ಕಥೆ ಹೊಸದು ತಾನೇ?

Guru Shishyaru - Final
Published on

ಬೆಂಗಳೂರು: ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್​ ಅವರು ಶರಣ್​ ಅಭಿನಯದ ಹೊಸ ಚಿತ್ರದ ಟೈಟಲ್​ ಮೋಷನ್​ ಪೋಸ್ಟರ್​ನ್ನು ಇಂದು ಬೆಳಿಗ್ಗೆ ಬಿಡುಗಡೆ ಮಾಡುತ್ತಾರೆ ಎಂಬ ಸುದ್ದಿ ಕೇಳಿದ್ದು ನೆನಪಿದೆ ತಾನೇ. ಈಗ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಟೈಟಲ್​ ಮೋಷನ್​ ಪೋಸ್ಟರ್​ ಬಿಡುಗಡೆಯಾಗಿದ್ದು, ಚಿತ್ರಕ್ಕೆ 'ಗುರುಶಿಷ್ಯರು' ಎಂಬ ಹೆಸರನ್ನು ಇಡಲಾಗಿದೆ.

'ಗುರುಶಿಷ್ಯರು' ಎಂಬುದು ದ್ವಾರಕೀಶ್​ ನಿರ್ಮಾಣದ ಜನಪ್ರಿಯ ಚಿತ್ರದ ಹೆಸರು. ಡಾ. ವಿಷ್ಣುವರ್ಧನ್​, ಮಂಜುಳಾ, ದ್ವಾರಕೀಶ್​ ಮುಂತಾದವರು ಅಭಿನಯಿಸಿದ್ದ ಈ ಚಿತ್ರವನ್ನು ಹಿರಿಯ ನಿರ್ದೇಶಕ ಭಾರ್ಗವ ನಿರ್ದೇಶನ ಮಾಡಿದ್ದು, ಈ ಚಿತ್ರ ಸೂಪರ್​ ಹಿಟ್​ ಆಗಿತ್ತು. ಈಗ ಆ ಚಿತ್ರದ ಹೆಸರನ್ನು ಶರಣ್​ ಅಭಿನಯದ ಚಿತ್ರಕ್ಕೆ ಇಡಲಾಗಿದೆ ಎನ್ನುವುದು ವಿಶೇಷ.

ಟೈಟಲ್​ ಏನೋ ಹಳೇದು, ಕಥೆ ಹೊಸದು ತಾನೇ? ಇಂಥದ್ದೊಂದು ಪ್ರಶ್ನೆ ಬಂದಿದ್ದು ಪ್ರೇಕ್ಷಕರಿಗಲ್ಲ. ಖುದ್ದು ಶರಣ್​ಗೆ ಬಂದಿದೆ. ಟೈಟಲ್​ ಮೋಷನ್​ ಪೋಸ್ಟರ್​ನ ಕೊನೆಯಲ್ಲಿ ಅವರು ತರುಣ್​ ಸುಧೀರ್​ಗೆ ಇಂಥದ್ದೊಂದು ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆ ಕೇಳಿ ತರುಣ್​ ಗಾಬರಿಯಾಗುತ್ತಾರೆ. ಈಗಾಗಲೇ ಈ ಟೈಟಲ್​ ಮೋಷನ್​ ಪೋಸ್ಟರ್​ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಗ್ಗೆ ಆಗಲೇ ಕುತೂಹಲ ಮೂಡಿದೆ.

ಶರಣ್​ ಅಭಿನಯದ ಈ ಚಿತ್ರವನ್ನು ಜಡೇಶ್​ ಹಂಪಿ ನಿರ್ದೇಶನ ಮಾಡಿದರೆ, ತರುಣ್​ ಕಿಶೋರ್​ ಸುಧೀರ್​ ಕ್ರಿಯೇಟಿವ್​ ಹೆಡ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ತರುಣ್​ ಸುಧೀರ್​ ಈ ಚಿತ್ರವನ್ನು ತಮ್ಮ ತರುಣ್​ ಸುಧೀರ್ ಕ್ರಿಯೇಟಿವ್ಸ್​ ಎಂಬ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡುತ್ತಿದ್ದಾರೆ.

'ಗುರು ಶಿಷ್ಯರು' ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದು, ಸುಧಾಕರ್ ರಾಜ್​ ಛಾಯಾಗ್ರಹಣ ಮಾಡಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net