

ಬೆಂಗಳೂರು: ಸತೀಶ್ ನೀನಾಸಂ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಎರಡು ವರ್ಷಗಳ ಹಿಂದೆಯೇ ಕೇಳಿಬಂದಿತ್ತು. ಅನೀಸ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಜನವರಿ ಐದರಿಂದ ಸತೀಶ್ ಭಾಗಿಯಾಗಲಿದ್ದಾರೆ. ಸತೀಶ್ ಅಭಿನಯದ ಚಿತ್ರದ ಹೆಸರು ‘ಪಗೆವನುಕ್ಕು ಅರುಳ್ವಾಯ್’. ‘ನಾಡೋಡಿಗಳ್’ ಖ್ಯಾತಿಯ ಶಶಿಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅವರೊಂದಿಗೆ ಸತೀಶ್ ತೆರೆ ಹಂಚಿಕೊಳ್ಳಲಿದ್ದಾರೆ.
ಈ ಕುರಿತು ವಿಜಯವಾಣಿ ಜತೆಗೆ ಮಾತನಾಡಿದ ಸತೀಶ್, ‘ಇದು ‘ಮ್ಯಾಕ್ಬೆತ್’ ನಾಟಕವನ್ನು ಆಧರಿಸಿ ಮಾಡುತ್ತಿರುವ ಸಿನಿಮಾ. ನಾನು ಮತ್ತು ಶಶಿಕುಮಾರ್ ಈ ಚಿತ್ರದಲ್ಲಿ ಕೈದಿಗಳಾಗಿ ನಟಿಸುತ್ತಿದ್ದೇವೆ. ನನ್ನ ಪಾತ್ರ ಬಹಳ ಚೆನ್ನಾಗಿದೆ’ ಎನ್ನುತ್ತಾರೆ. ಈ ಚಿತ್ರದಲ್ಲಿ ಬಿಂದುಮಾಧವಿ ಮತ್ತು ವಾಣಿ ಬೋಜನ್ ನಾಯಕಿಯರಾಗಿ ನಟಿಸುತ್ತಿದ್ದು, ನಾಸರ್, ಜಯಪ್ರಕಾಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಿಬ್ರನ್ ಅವರ ಸಂಗೀತ ಈ ಚಿತ್ರಕ್ಕಿದೆ.
ಇನ್ನು ಸದ್ಯ ಮೈಸೂರಿನಲ್ಲಿ ‘ಪೆಟ್ರೋಮ್ಯಾಕ್ಸ್’ ಚಿತ್ರದ ಚಿತ್ರೀಕರಣದಲ್ಲಿ ಸತೀಶ್ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಜನವರಿ 4ಕ್ಕೆ ಮುಕ್ತಾಯವಾಗಲಿದೆಯಂತೆ. ‘ಒಂದು ಹಾಡಿನ ಚಿತ್ರೀಕರಣ ಹೊರತುಪಡಿಸಿದರೆ, ಜನವರಿ 4ರ ಹೊತ್ತಿಗೆ ‘ಪೆಟ್ರೋಮ್ಯಾಕ್ಸ್’ ಚಿತ್ರದ ಚಿತ್ರೀಕರಣ ಸಂಪೂರ್ಣವಾಗುತ್ತದೆ. ಜನವರಿಯಲ್ಲಿ ತಮಿಳು ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ಬಂದು, ನಂತರ ಆ ಚಿತ್ರವನ್ನು ಮುಗಿಸುತ್ತೇನೆ. ಇನ್ನು ‘ದಸರಾ’ ಚಿತ್ರದ ಬಾಕಿ ಇರುವ ಚಿತ್ರೀಕರಣ ಮುಗಿಸಿ, ‘ಮ್ಯಾಟ್ನಿ’ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ ಸತೀಶ್ ನೀನಾಸಂ.