

ಹೈದರಾಬಾದ್: ಕರೊನಾ ಹಾವಳಿಯಿಂದಾಗಿ ದೇಶದ ಹೆಚ್ಚಿನ ಭಾಗ ಲಾಕ್ಡೌನ್ ಆಗಿರುವ ಸಮಯದಲ್ಲಿ ಹಲವು ಕ್ಷೇತ್ರದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಆಟೋ ರಿಕ್ಷಾ ಚಾಲಕರು ಇದರಲ್ಲಿ ಪ್ರಮುಖವಾದವರು. ಹೀಗಾಗಿ ಅವರಿಗೆ ಆಹಾರದ ಕಿಟ್ ನೀಡಿ ನೆರವಾಗುವ ಯೋಜನೆಯೊಂದನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟುಗಾರ್ತಿ ಹಾಗೂ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಹಮ್ಮಿಕೊಂಡಿದ್ದಾರೆ. ಇದರಂತೆ ಅವರ ಗೈರಿನಲ್ಲಿ ತಂದೆ ದೊರೈ ರಾಜ್, ಆಟೋ ಚಾಲಕರಿಗೆ ಆಹಾರದ ಕಿಟ್ ವಿತರಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಸದ್ಯ ಮುಂಬೈನಲ್ಲಿ ಕ್ವಾರಂಟೈನ್ನಲ್ಲಿರುವ ಮಿಥಾಲಿ ರಾಜ್, ತಮ್ಮ ತಂದೆ ಆಟೋ ಚಾಲಕರಿಗೆ ಆಹಾರದ ಕಿಟ್ ವಿತರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ತಂದೆ ಸರಿಯಾಗಿ ಮಾಸ್ಕ್ ಧರಿಸಿರದ ಬಗ್ಗೆಯೂ ತಮಾಷೆಯಾಗಿಯೇ ಕಾಲೆಳೆದಿದ್ದಾರೆ.
ಮಿಥಾಲಿ ರಾಜ್ ಇನೀಶಿಯೇಟಿವ್ ಅಂಗವಾಗಿ ಆಟೋ ಚಾಲಕರಿಗೆ ಆಹಾರದ ಕಿಟ್ ಮತ್ತು ಸಣ್ಣ ಮೊತ್ತವನ್ನು ವಿತರಿಸಲಾಯಿತು. ಕಳೆದ ವರ್ಷ ಕೋವಿಡ್ ಸಮಯದಲ್ಲಿ ಇದನ್ನು ಆರಂಭಿಸಿದ್ದೆವು. ನನ್ನ ಗೈರಿನಲ್ಲಿ ತಂದೆ ಈ ಕೆಲಸವನ್ನು ನಿರ್ವಹಿಸಿದರು. ಆದರೆ ಅವರ ಮಾಸ್ಕ್ನದ್ದೇ ಸಮಸ್ಯೆಯಾಗಿದೆ ಎಂದು ಮಿಥಾಲಿ ರಾಜ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.