

ನವದೆಹಲಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮುಂತಾದ ಪ್ರಮುಖ ಆಟಗಾರರನ್ನು ಒಳಗೊಂಡ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವ ನಡುವೆ ಜುಲೈನಲ್ಲಿ ಶ್ರೀಲಂಕಾ ಪ್ರವಾಸಕ್ಕೆ 2ನೇ ಸ್ತರದ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ಈಗಾಗಲೆ ಯೋಜನೆ ಹಾಕಿಕೊಂಡಿದೆ. ಈ ನಡುವೆ ಈ 2ನೇ ಸ್ತರದ ಭಾರತ ತಂಡ ಹೇಗಿರಬಹುದು, ಯಾವೆಲ್ಲ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆಯಬಹುದು ಎಂಬ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಖ್ಯಾತ ವೀಕ್ಷಕ ವಿವರಣೆಕಾರ ಹರ್ಷ ಬೋಗ್ಲೆ ಅವರೂ ಶ್ರೀಲಂಕಾ ಪ್ರವಾಸಕ್ಕೆ ತಮ್ಮ ಆಯ್ಕೆಯ ಭಾರತ ತಂಡವನ್ನು ಪ್ರಕಟಿಸಿದ್ದು, ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಅದಕ್ಕೆ ನಾಯಕರಾಗಿ ನೇಮಿಸಿರುವುದು ವಿಶೇಷವಾಗಿದೆ.
ಶ್ರೀಲಂಕಾ ಪ್ರವಾಸದ ಟಿ20 ಮತ್ತು ಏಕದಿನ ಸರಣಿಗಳಿಗೆ ಒಟ್ಟು 21 ಆಟಗಾರರನ್ನು ಹರ್ಷ ಬೋಗ್ಲೆ ಹೆಸರಿಸಿದ್ದು, ಅದರಲ್ಲಿ ಇಬ್ಬರು ಕನ್ನಡಿಗರೂ ಸ್ಥಾನ ಪಡೆದಿದ್ದಾರೆ. ಅವರೆಂದರೆ ಅನುಭವಿ ಬ್ಯಾಟ್ಸ್ಮನ್ ಮನೀಷ್ ಪಾಂಡೆ ಮತ್ತು ಯುವ ಎಡಗೈ ಆರಂಭಿಕ ದೇವದತ್ ಪಡಿಕಲ್.
ಹಾಲಿ ಲೆಕ್ಕಾಚಾರದ ಪ್ರಕಾರ ಎಡಗೈ ಆರಂಭಿಕ ಶಿಖರ್ ಧವನ್ 2ನೇ ಸ್ತರದ ಭಾರತ ತಂಡಕ್ಕೆ ನಾಯಕರಾಗಬಹುದು ಎಂಬ ನಿರೀೆ ಹೆಚ್ಚಿದೆ. ಆದರೆ ಹರ್ಷ ಬೋಗ್ಲೆ ಮಾತ್ರ ಭುವಿಗೆ ನಾಯಕತ್ವ ಒಪ್ಪಿಸಿ, ಧವನ್ಗೆ ಪೃಥ್ವಿ ಷಾ ಜತೆಗೆ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಮಾತ್ರ ನೀಡಿದ್ದಾರೆ. ಧವನ್ ಬ್ಯಾಟ್ಸ್ಮನ್ ಆಗಿ ಉಳಿಯುವುದೇ ಉತ್ತಮ ಎಂದಿರುವ ಹರ್ಷ ಬೋಗ್ಲೆ, ನಾಯಕತ್ವದ ರೇಸ್ನಲ್ಲಿರುವ ಮತ್ತೋರ್ವ ಆಟಗಾರ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ವಿಚಾರದಿಂದಾಗಿ ಹಿನ್ನಡೆ ಹೊಂದಿದ್ದಾರೆ ಎಂದಿದ್ದಾರೆ.
ನನ್ನ ಪ್ರಕಾರ ನಾಯಕತ್ವಕ್ಕೆ 3 ಆಯ್ಕೆಗಳಿವೆ. ಒಬ್ಬರು ಶಿಖರ್ ಧವನ್. ಆದರೆ ಅವರು ನಾಯಕರಾಗಲು ಬಯಸುತ್ತಾರೆ ಎಂದು ನನಗನಿಸುವುದಿಲ್ಲ. ಅವರು ತಂಡದಲ್ಲಿ ಸಾಮಾನ್ಯ ಆಟಗಾರರಾಗಿ ಮಾತ್ರ ಸ್ಥಾನ ಉಳಿಸಿಕೊಳ್ಳಲು ಬಯಸುತ್ತಾರೆ. ಹಾರ್ದಿಕ್ ಪಾಂಡ್ಯ ಮತ್ತೊಂದು ಆಯ್ಕೆ. ಆದರೆ ಅವರ ಫಿಟ್ನೆಸ್ ಯಾವಾಗಲೂ ಸ್ವಲ್ಪ ಅನುಮಾನದಿಂದ ಕೂಡಿರುತ್ತದೆ. ಅವರು ಬೌಲಿಂಗ್ ಮಾಡುತ್ತಾರೆಯೇ, ಇಲ್ಲವೇ ಎಂಬುದೇ ಸ್ಪಷ್ಟವಿಲ್ಲ. ಹೀಗಾಗಿ ನಾನು ಭುವನೇಶ್ವರ್ ಕುಮಾರ್ ಅವರನ್ನೇ ನಾಯಕರಾಗಿ ಹೆಸರಿಸುವೆ ಎಂದು 59 ವರ್ಷದ ಹರ್ಷ ಬೋಗ್ಲೆ ಹೇಳಿದ್ದಾರೆ.
ಕನ್ನಡಿಗ ಮನೀಷ್ ಪಾಂಡೆಗೆ ಏಕದಿನ ತಂಡದಲ್ಲಿ ಮಾತ್ರ ಸ್ಥಾನ ನೀಡಿರುವ ಹರ್ಷ ಬೋಗ್ಲೆ ಟಿ20 ತಂಡದಿಂದ ಕಡೆಗಣಿಸಿದ್ದಾರೆ. ಆದರೆ 50 ಓವರ್ಗಳ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಅವರಂಥ ಅನುಭವಿ ಆಟಗಾರರ ಅಗತ್ಯವಿದೆ ಎಂದಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ಹರ್ಷ ಬೋಗ್ಲೆ ಹೆಸರಿಸಿರುವ ತಂಡಗಳು (ಬ್ಯಾಟಿಂಗ್ ಕ್ರಮಾಂಕ ಪ್ರಕಾರ):
ಏಕದಿನ: ಶಿಖರ್ ಧವನ್, ಪೃಥ್ವಿ ಷಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್.
ಟಿ20: ಶಿಖರ್ ಧವನ್, ಪೃಥ್ವಿ ಷಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ತೆವಾಟಿಯಾ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ರಾಹುಲ್ ಚಹರ್/ಯಜುವೇಂದ್ರ ಚಾಹಲ್, ವರುಣ್ ಚಕ್ರವತಿರ್.
ಇತರ ಆಟಗಾರರು: ದೇವದತ್ ಪಡಿಕಲ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಲಲಿತ್ ಯಾದವ್, ನವದೀಪ್ ಸೈನಿ, ಜೈದೇವ್ ಉನಾದ್ಕತ್, ಚೇತನ್ ಸಕಾರಿಯಾ.