ನಾಪತ್ತೆಯಾಗಿದ್ದ ಸಹೋದರಿ ರಕ್ಷಾಬಂಧನದಂದೇ ಪತ್ತೆ; ಕಾಣೆಯಾಗಿದ್ದ ತಂಗಿ 'ರಿಮಿ'ಗೆ ಇದ್ದ 'ಅಡ್ಡಿ' ಏನು?

Rimi
Published on

ಬೆಂಗಳೂರು: ಎರಡು ವಾರಗಳ ಹಿಂದೆ ನಗರದಲ್ಲಿ ಕಾಣೆಯಾಗಿದ್ದ ಸಹೋದರಿ ರಕ್ಷಬಂಧನದ ದಿನವಾದ ಇಂದೇ ಪತ್ತೆಯಾಗಿದ್ದು, ಸಹೋದರನಿಗೆ ರಾಖಿ ಕಟ್ಟುವ ಮೂಲಕ ಮತ್ತೆ ಮನೆ ಸೇರಿಕೊಂಡಿದ್ದಾಳೆ. ನಾಪತ್ತೆ ಆಗಿದ್ದ ರಿಮಿ ಅಡ್ಡಿ ಕುರಿತು ಆಕೆಯ ಅಣ್ಣ ವಿವೇಕ್ ಅಡ್ಡಿ ಆಗಸ್ಟ್ 6ರಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸ್, ನೂರಾರು ಸಿಸಿಟಿವಿ ಕ್ಲಿಪ್ಪಿಂಗ್ಸ್ ಪರಿಶೀಲಿಸಿ, ನಗರದ ವಿವಿಧೆಡೆ ಹುಡುಕಾಟ ನಡೆಸಿ, ನಾನಾ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದ್ದು, ಇಂದು ರಿಮಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಸಿಕ್ಕ ಬಳಿಕ ಸಹೋದರನನ್ನು ಠಾಣೆಗೆ ಕರೆಸಿ, ಆಕೆಯಿಂದ ರಾಖಿ ಕಟ್ಟಿಸಿ, ಕೇಕ್ ಕತ್ತರಿಸಿ, ರಕ್ಷಾಬಂಧನ ಆಚರಿಸುವ ಮೂಲಕ ಶುಭ ಹಾರೈಸಿ ಇಬ್ಬರನ್ನೂ ಅಮೃತಹಳ್ಳಿ ಪೊಲೀಸರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಅಷ್ಟಕ್ಕೂ ಆಕೆ ಕಾಣೆಯಾಗಿದ್ದು ಯಾಕೆ ಎಂಬ ಬಗ್ಗೆ ಪೊಲೀಸರು ನಡೆಸಿದ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ರಿಮಿ ಅಡ್ಡಿ ಪತ್ತೆಯಾದ ಬಳಿಕ ಆಕೆಯನ್ನು ವಿಚಾರಿಸಿದ ಪೊಲೀಸರು, ನಡೆದಿದ್ದನ್ನೆಲ್ಲ ಹೇಳುವಂತೆ ಸೂಚಿಸಿದ್ದರು. ಆಗ ರಿಮಿ ಅಡ್ಡಿ, ರಾಂಚಿ ಮೂಲದವರಾಗಿದ್ದು, ಕನ್ನಡ ಬರುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ಆಕೆಗೆ ಬಂಗಾಳಿ ಭಾಷೆ ಬಿಟ್ಟು ಬೇರೆ ಯಾವುದೇ ಭಾಷೆ ಬರುತ್ತಿರಲಿಲ್ಲವಾದ್ದರಿಂದ ತಪ್ಪಿಸಿಕೊಳ್ಳುವಂತಾಗಿತ್ತು ಎಂಬುದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net