ಲಂಡನ್​ಗೆ ತೆರಳುತ್ತಿದ್ದ ರೈಲಿನಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿಗಳು; 9 ಮಂದಿಗೆ ಗಾಯ; ಇಬ್ಬರು ಶಂಕಿತರ ಬಂಧನ| Stabbed

ವಿಜಯವಾಣಿ - 2025-11-02T083527.626
Published on

ಲಂಡನ್​: ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಿನ್ನೆ ಸಂಜೆ ಲಂಡನ್​ಗೆ ತೆರಳುತ್ತಿದ್ದ ಲಂಡನ್ ನಾರ್ತ್ ಈಸ್ಟರ್ನ್ ರೈಲಿನಲ್ಲಿ ಸಾಮೂಹಿಕವಾಗಿ ದುಷ್ಕರ್ಮಿಗಳು ಸಿಕ್ಕಸಿಕ್ಕವರಿಗೆ ಚಾಕು ಇರಿದಿದ್ದು(Stabbed), ಕನಿಷ್ಠ 9 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಂಕಿತ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ಇಂದು (ನ. 02) ವರದಿಯಾಗಿದೆ.

ಡಾನ್‌ಕಾಸ್ಟರ್‌ನಿಂದ ಲಂಡನ್ ಕಿಂಗ್ಸ್ ಕ್ರಾಸ್‌ಗೆ ಪ್ರಯಾಣಿಸುತ್ತಿದ್ದ ಲಂಡನ್ ನಾರ್ತ್ ಈಸ್ಟರ್ನ್ ರೈಲಿನಲ್ಲಿ(LNER)  ಸಂಜೆ 7.04ಕ್ಕೆ ಈ ದಾಳಿ ನಡೆದಿದೆ.  ಸಂಭವಿಸಿದೆ. ರೈಲು ದಕ್ಷಿಣಕ್ಕೆ ಕೇಂಬ್ರಿಡ್ಜ್‌ಶೈರ್‌ನ ಹಂಟಿಂಗ್‌ಡನ್ ಕಡೆಗೆ ಸಾಗುತ್ತಿದ್ದಂತೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ತಕ್ಷಣ ಪೊಲೀಸರು ಆಗಮಿಸಿದ್ದು ಗಾಯಾಳುಗಳನ್ನು ರಕ್ಷಿಸಿ ಆ್ಯಂಬುಲೆನ್ಸ್​ಗಳಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಬ್ರಿಟಿಷ್ ಸಾರಿಗೆ ಪೊಲೀಸರು, ಹತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಒಂಬತ್ತು ಮಂದಿಗೆ ಮಾರಣಾಂತಿಕ ಗಂಭೀರ ಗಾಯಗಳಾಗಿವೆ. ಇದನ್ನು ಪ್ರಮುಖ ಭಯೋತ್ಪಾದನೆ ಘಟನೆ ಎಂದು ಘೋಷಿಸಲಾಗಿದ್ದು, ಭಯೋತ್ಪಾದನಾ ನಿಗ್ರಹ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಘಟನೆ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ದಿ ಟೈಮ್ಸ್ ಪತ್ರಿಕೆ ಜೊತೆ ಮಾತನಾಡಿದ್ದು, ದೊಡ್ಡ ಚಾಕುವನ್ನು ಹಿಡಿದ ವ್ಯಕ್ತಿಯನ್ನು ನೋಡಿರುವುದಾಗಿ ಹೇಳಿದ್ದು, ಜನರು ರೈಲಿನ ಶೌಚಾಲಯಗಳಲ್ಲಿ ಅಡಗಿಕೊಂಡಿದ್ದರು. ಅಲ್ಲೆಲ್ಲಾ ರಕ್ತ ಚೆಲ್ಲಿತ್ತು ಎಂದು ಹೇಳಿದ್ದಾರೆ.

ಇನ್ನೂ ಘಟನೆಯನ್ನು ಖಂಡಿಸಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಭಯಾನಕ ಮತ್ತು ತೀವ್ರ ಕಳವಳಕಾರಿ ಎಂದು ಕರೆದಿದ್ದಾರೆ. ಬಾಧಿತರಾದ ಎಲ್ಲರೊಂದಿಗೆ ನನ್ನ ಆಲೋಚನೆಗಳು ಇವೆ, ತುರ್ತು ಸೇವೆಗಳ ತ್ವರಿತ ಪ್ರತಿಕ್ರಿಯೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net