

ಮುಂಬೈ: ಭಾರತದ ಪುರುಷರ ಕ್ರಿಕೆಟ್ ತಂಡ 1983ರಲ್ಲಿ ಆಗಿನ ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಲಾರ್ಡ್ಸ್ನಲ್ಲಿ ಚೊಚ್ಚಲ ವಿಶ್ವಕಪ್ ಎತ್ತಿಹಿಡಿದಿತ್ತು. ಈ ಗೆಲುವು ಮೈದಾನದೊಳಗೆ ಮಾತ್ರವಲ್ಲದೆ, ಮೈದಾನದ ಹೊರಗೂ ಭಾರತ ತಂಡವನ್ನು ಶ್ರೀಮಂತಗೊಳಿಸಿತ್ತು. ಇದೀಗ ಭಾರತದ ಮಹಿಳೆಯರಿಗೂ ಅಂಥದ್ದೇ ಚಾರಿತ್ರಿಕ ಮತ್ತು "ಟರ್ನಿಂಗ್ ಪಾಯಿಂಟ್' ಆಗಬಹುದಾದಂಥ ಜಯವನ್ನು ತವರು ನೆಲದಲ್ಲೇ ದಾಖಲಿಸುವ ಅವಕಾಶ ಕೂಡಿ ಬಂದಿದೆ. 13ನೇ ಆವೃತ್ತಿಯ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಭಾನುವಾರ ನವಿಮುಂಬೈನ ಡಾ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹರ್ಮಾನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡದ ಸವಾಲು ಎದುರಿಸಲಿದೆ. ಉಪಾಂತ್ಯದಲ್ಲಿ ಹಾಲಿ ಮತ್ತು 7 ಬಾರಿಯ ಚಾಂಪಿಯನ್ ಆಸ್ಟ್ರೆಲಿಯಾ ತಂಡವನ್ನು ಸೋಲಿಸಿದ ಆತ್ಮವಿಶ್ವಾಸದೊಂದಿಗೆ ಭಾರತದ ಮಹಿಳೆಯರು ಕಣಕ್ಕಿಳಿಯಲಿದ್ದು, ಚೊಚ್ಚಲ ಐಸಿಸಿ ಟ್ರೋಫಿ ಸಂಭ್ರಮವನ್ನು ಕಾಣಲು ತುದಿಗಾಲಲ್ಲಿ ನಿಂತಿದ್ದಾರೆ.
ಉಭಯ ತಂಡಗಳು ಫೈನಲ್ ಹಾದಿಯಲ್ಲಿ ಹಲವು ಸವಾಲುಗಳನ್ನು ದಾಟಿ ಬಂದಿವೆ. ಭಾರತ ತಂಡ ಆರಂಭಿಕ 2 ಗೆಲುವಿನ ಬಳಿಕ ಹ್ಯಾಟ್ರಿಕ್ ಸೋಲು ಅನುಭವಿಸಿ, ಅಭಿಮಾನಿಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಜತೆಗೆ ನಾಕೌಟ್ ಹಂತಕ್ಕೇರುವುದೇ ಅನುಮಾನವೆನಿಸಿತ್ತು. ಆಗ ನ್ಯೂಜಿಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿದ್ದಲ್ಲದೆ, ಉಪಾಂತ್ಯದಲ್ಲಿ ಆಸೀಸ್ ಎದುರು ದಾಖಲೆಯ ಚೇಸಿಂಗ್ ಮಾಡಿ ಬೀಗಿತ್ತು. ಅತ್ತ ದ. ಆಫ್ರಿಕಾ ತಂಡ ಟೂರ್ನಿಯ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ಎದುರು ಕೇವಲ 69 ರನ್ಗಳಿಗೆ ಆಲೌಟ್ ಆಗಿ ಸೋತಿದ್ದರೆ, ನಂತರ ಸತತ 5 ಜಯ ಸಾಧಿಸಿದ ಬಳಿಕ ಕೊನೇ ಲೀಗ್ ಪಂದ್ಯದಲ್ಲಿ ಆಸೀಸ್ ಎದುರು ಮತ್ತೆ 97 ರನ್ಗಳಿಗೆ ಮುಗ್ಗರಿಸಿತ್ತು. ಆದರೂ ಸೆಮೀಸ್ನಲ್ಲಿ 4 ಬಾರಿಯ ಚಾಂಪಿಯನ್ ಇಂಗ್ಲೆಂಡ್ ಎದುರು ದೊಡ್ಡ ಅಂತರದಿಂದ ಗೆದ್ದು ಪುಟಿದೆದ್ದಿತ್ತು. ಇದೀಗ ಒಂದು ತಂಡಕ್ಕೆ ಮಾತ್ರ ಈ ಯಶೋಗಾಥೆಯನ್ನು ಟ್ರೋಫಿಯೊಂದಿಗೆ ಸಂಭ್ರಮಿಸುವ ಅದೃಷ್ಟ ಒಲಿಯಲಿದೆ.
ವಿಶ್ವಾಸದಲ್ಲಿ ಹರ್ಮಾನ್ಪ್ರೀತ್ ಪಡೆ
ಎಂಎಸ್ ಧೋನಿ ಬಳಗ 2011ರಲ್ಲಿ ತವರಿನಲ್ಲೇ ವಿಶ್ವಕಪ್ ಗೆದ್ದಂತೆ, ಹರ್ಮಾನ್ಪ್ರೀತ್ ಕೌರ್ ಪಡೆ ಕೂಡ ತವರಿನಲ್ಲೇ ವಿಶ್ವಕಪ್ ಎತ್ತಿಹಿಡಿದು ವಿಜೃಂಭಿಸುವ ನಿರೀಕ್ಷೆ ಹರಡಿದೆ. ಜೆಮೀಮಾ ರೋಡ್ರಿಗಸ್ ಶತಕದ ಸಾಹಸದಿಂದ ಬಲಿಷ್ಠ ಆಸೀಸ್ ಎದುರು ದಾಖಲೆ ಚೇಸಿಂಗ್ ನಡೆಸಿ ಗೆದ್ದ ಬಳಿಕ ಭಾರತದ ಆತ್ಮವಿಶ್ವಾಸ ದುಪ್ಪಟ್ಟುಗೊಂಡಿದೆ. ಫೈನಲ್ನಲ್ಲಿ ಸ್ಮೃತಿ ಮಂದನಾ, ಶೆಫಾಲಿ ವರ್ಮ, ದೀಪ್ತಿ ಶರ್ಮ, ರಿಚಾ ಘೋಷ್, ಅಮನ್ಜೋತ್, ರೇಣುಕಾ ಸಿಂಗ್ ಅವರಿಂದ ನೈಜ ನಿರ್ವಹಣೆ ಬಂದರೆ ಭಾರತಕ್ಕೆ ಗೆಲುವು ಕಠಿಣವಲ್ಲ. ಆದರೆ ದ. ಆಫ್ರಿಕಾವೂ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದು, ಎಡಗೈ ಸ್ಪಿನ್ನರ್ಸ್ (ಮ್ಲಾಬಾ, ಟೆಯಾನ್) ಎದುರಿನ ದೌರ್ಬಲ್ಯವೂ ಕಾಡದಂತೆ ಎಚ್ಚರಿಕೆಯೂ ಅಗತ್ಯವಾಗಿದೆ.
*ಸೋಲಿನ ನೋವು ಹೇಗಿರುತ್ತದೆ ಎಂದು ನೋಡಿದ್ದೇನೆ. ಈಗ ವಿಶ್ವಕಪ್ ಗೆಲುವಿನ ಅನುಭವವನ್ನು ಪಡೆಯಲು ಬಯಸಿದ್ದೇನೆ. ಭಾನುವಾರ ವಿಶೇಷ ದಿನವಾಗುವ ನಿರೀಕ್ಷೆಯಲ್ಲಿದ್ದೇವೆ.
| ಹರ್ಮಾನ್ಪ್ರೀತ್ ಕೌರ್, ಭಾರತ ತಂಡದ ನಾಯಕಿ
ಆರಂಭ: ಮಧ್ಯಾಹ್ನ 3.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
4: ಫೈನಲ್ನಲ್ಲಿ ಯಾವುದೇ ತಂಡ ಗೆದ್ದರೂ, ಮಹಿಳಾ ವಿಶ್ವಕಪ್ ಗೆದ್ದ 4ನೇ ತಂಡವೆನಿಸಲಿದೆ. ಆಸೀಸ್, ಇಂಗ್ಲೆಂಡ್, ನ್ಯೂಜಿಲೆಂಡ್ ಹಿಂದಿನ 3 ತಂಡಗಳು.
*1: ಆಸ್ಟ್ರೆಲಿಯಾ-ಇಂಗ್ಲೆಂಡ್ ಎರಡೂ ತಂಡಗಳಿರದ ಮೊದಲ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಇದಾಗಿದೆ. ಕಳೆದ ವರ್ಷ ಟಿ20 ವಿಶ್ವಕಪ್ನಲ್ಲೂ ಇವೆರಡೂ ತಂಡಗಳಿರದ ಮೊದಲ ಫೈನಲ್ ನಡೆದಿತ್ತು.
ಫೈನಲ್ ಸೋಲಿನ ಶಾಪ ವಿಮೋಚನೆ?
ಭಾರತದ ಮಹಿಳೆಯರು 2005 ಮತ್ತು 2017ರ ಬಳಿಕ 3ನೇ ಬಾರಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಡಲಿದ್ದು, "ಥರ್ಡ್ ಟೈಮ್ ಲಕ್ಕಿ' ಎನಿಸುವ ನಿರೀಕ್ಷೆಯಲ್ಲಿದೆ. ಅತ್ತ ದ. ಆಫ್ರಿಕಾ ಮಹಿಳೆಯರಿಗೆ ಏಕದಿನ ವಿಶ್ವಕಪ್ನಲ್ಲಿ ಇದು ಮೊದಲ ಫೈನಲ್ ಆಗಿದ್ದರೂ, ಐಸಿಸಿ ಟೂರ್ನಿಯಲ್ಲಿ ಇದು 3ನೇ ಫೈನಲ್. 2023 ಮತ್ತು 2024ರ ಟಿ20 ವಿಶ್ವಕಪ್ ಫೈನಲ್ಗೇರಿದ್ದ ದ. ಆಫ್ರಿಕಾ ರನ್ನರ್ಅಪ್ಗೆ ತೃಪ್ತಿಪಟ್ಟಿತ್ತು. ಹೀಗಾಗಿ ಈ ಬಾರಿ ಭಾರತ-ದ. ಆಫ್ರಿಕಾ ಪೈಕಿ ಒಂದು ತಂಡವಷ್ಟೇ ಫೈನಲ್ ಸೋಲಿನ ಶಾಪದಿಂದ ವಿಮೋಚನೆ ಪಡೆದುಕೊಳ್ಳಲಿದೆ.
ಮಳೆ ಭೀತಿ, ಮೀಸಲು ದಿನವಿದೆ
ಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯ ಭೀತಿ ಇದೆ. ಅದರಲ್ಲೂ ಹಗಲಿನಲ್ಲಿ ಮಳೆ ಸಾಧ್ಯತೆ ಹೆಚ್ಚಿದೆ. ಫಲಿತಾಂಶ ನಿರ್ಧಾರಕ್ಕೆ ನಿಗದಿತ ಓವರ್ ನಡೆಯದಿದ್ದರೆ ಪಂದ್ಯ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲ್ಪಡಲಿದೆ. ಸೋಮವಾರವೂ ಪಂದ್ಯ ನಡೆಯದಿದ್ದರೆ ಐಸಿಸಿ, ಉಭಯ ತಂಡಗಳನ್ನು "ಜಂಟಿ ಚಾಂಪಿಯನ್' ಎಂದು ಘೋಷಿಸಲಿದೆ.
ಆಸೀಸ್ ಸೋಲಿಸಿದವರಿಗೆ ಟ್ರೋಫಿ?
ಮಹಿಳೆಯರ ಏಕದಿನ ವಿಶ್ವಕಪ್ ಇತಿಹಾಸ ಗಮನಿಸಿದಾಗ ಬಹುತೇಕ ಆವೃತ್ತಿಗಳಲ್ಲಿ ಆಸ್ಟ್ರೆಲಿಯಾಕ್ಕೆ ಅಥವಾ ಆಸ್ಟ್ರೆಲಿಯಾವನ್ನು ಸೋಲಿಸಿದವರಿಗೆ ಪ್ರಶಸ್ತಿ ಒಲಿದಿರುವುದನ್ನು ಕಾಣಬಹುದು. ಹೀಗಾಗಿ ಈ ಬಾರಿ ಸೆಮೀಸ್ನಲ್ಲಿ ಆಸೀಸ್ಗೆ ಸೋಲುಣಿಸಿರುವ ಭಾರತಕ್ಕೆ ಟ್ರೋಫಿ ಗೆಲ್ಲುವ ನಿರೀಕ್ಷೆ ಹೆಚ್ಚಿದೆ. ಹಿಂದಿನ 12 ಆವೃತ್ತಿಗಳಲ್ಲಿ 7 ಬಾರಿ ಆಸ್ಟ್ರೆಲಿಯಾವೇ ವಿಶ್ವಕಪ್ ಗೆದ್ದಿದ್ದರೆ, 1973, 2000ದಲ್ಲಿ ಆಸ್ಟ್ರೆಲಿಯಾವನ್ನು ಫೈನಲ್ನಲ್ಲಿ ಮಣಿಸಿದ ತಂಡಕ್ಕೆ ಪ್ರಶಸ್ತಿ ಒಲಿದಿತ್ತು. ಇನ್ನು 1993, 2017ರಲ್ಲಿ ಲೀಗ್ ಹಂತದಲ್ಲಿ ಆಸ್ಟ್ರೆಲಿಯಾವನ್ನು ಮಣಿಸಿದ್ದ ಇಂಗ್ಲೆಂಡ್ ವಿಶ್ವಕಪ್ ಗೆದ್ದಿತ್ತು. 2009ರಲ್ಲಿ ಮಾತ್ರ ಸೂಪರ್-6 ಹಂತದಲ್ಲಿ ಆಸೀಸ್ಗೆ ಶರಣಾಗಿದ್ದರೂ ಇಂಗ್ಲೆಂಡ್ ಪ್ರಶಸ್ತಿ ಗೆದ್ದಿತ್ತು. ಲೀಗ್ ಹಂತದಲ್ಲಿ ಆಸೀಸ್ಗೆ ಸೋಲುಣಿಸಿದ್ದ ನ್ಯೂಜಿಲೆಂಡ್ ರನ್ನರ್ಅಪ್ಗೆ ತೃಪ್ತಿಪಟ್ಟಿತ್ತು.
ಮತ್ತೆ ಹೊಸ ಚಾಂಪಿಯನ್!
ಜಾಗತಿಕ ಕ್ರಿಕೆಟ್ ಟೂರ್ನಿಗಳಲ್ಲಿ ಹಾಲಿ ವರ್ಷ ಹೊಸ ಚಾಂಪಿಯನ್ನರ ವರ್ಷವೆನಿಸಿದೆ. ವರ್ಷಾರಂಭದಲ್ಲಿ ಆಸ್ಟ್ರೆಲಿಯಾದ ಬಿಗ್ಬ್ಯಾಷ್ ಲೀಗ್ನಲ್ಲಿ ಹೋರ್ಬಟ್ ಹರಿಕೇನ್ 14 ಆವೃತ್ತಿಗಳಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದಿದ್ದರೆ, ಐಪಿಎಲ್ನಲ್ಲಿ ಆರ್ಸಿಬಿ ತಂಡ 18 ವರ್ಷಗಳ ಬಳಿಕ ಚೊಚ್ಚಲ ಕಪ್ ಒಲಿಸಿಕೊಂಡಿತ್ತು. ದ. ಆಫ್ರಿಕಾದ ಎಸ್ಎ20 ಲೀಗ್ನಲ್ಲಿ ಎಂಐ ಕೇಪ್ಟೌನ್ ಮತ್ತು ಯುಎಇಯ ಇಂಟರ್ನ್ಯಾಷನಲ್ ಲೀಗ್ ಟಿ20ಯಲ್ಲಿ ದುಬೈ ಕ್ಯಾಪಿಟಲ್ಸ್ ಮೊದಲ ಬಾರಿ ಪ್ರಶಸ್ತಿ ಜಯಿಸಿತ್ತು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ದ. ಆಫ್ರಿಕಾ ಪುರುಷರ ತಂಡ ಮೊದಲ ಬಾರಿ ಟ್ರೋಫಿ ಗೆದ್ದಿತ್ತು. ಇದೀಗ ಮಹಿಳಾ ವಿಶ್ವಕಪ್ನಲ್ಲೂ ಭಾರತ-ದ. ಆಫ್ರಿಕಾ ಪೈಕಿ ಯಾರೇ ಗೆದ್ದರೂ ಹೊಸ ಚಾಂಪಿಯನ್ ಎನಿಸಲಿದ್ದಾರೆ.
ಕಿರಿಯರ ವಿಶ್ವಕಪ್ ಪುನರಾವರ್ತನೆ!
ಹಾಲಿ ವರ್ಷಾರಂಭದಲ್ಲಿ ನಡೆದ 19 ವಯೋಮಿತಿ ಮಹಿಳೆಯರ ಟಿ20 ವಿಶ್ವಕಪ್ನಲ್ಲೂ ಭಾರತ-ದ. ಆಫ್ರಿಕಾ ಮುಖಾಮುಖಿ ಆಗಿದ್ದವು. ಆಗ ಕನ್ನಡತಿ ನಿಕಿ ಪ್ರಸಾದ್ ಸಾರಥ್ಯದ ಭಾರತ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ಭಾರತದ ಹಿರಿಯ ಆಟಗಾರ್ತಿಯರಿಗೂ ಇದೇ ಫಲಿತಾಂಶ ಪುನರಾವರ್ತಿಸುವ ಅವಕಾಶವಿದೆ.
*39: ಚಾಂಪಿಯನ್ ತಂಡ 39.77 ಕೋಟಿ ರೂ. (4.48 ದಶಲಕ್ಷ ಡಾಲರ್) ಗಳಿಸಲಿದೆ. ಇದು ಕಳೆದ ಆವೃತ್ತಿಗಿಂತ ಶೇ.239 ಅಧಿಕವಾಗಿದೆ. ರನ್ನರ್ಅಪ್ ತಂಡ 19.88 ಕೋಟಿ ರೂ. (2.24 ದಶಲಕ್ಷ ಡಾಲರ್) ಪಡೆಯಲಿದೆ. ಇದು ಕಳೆದ ಆವೃತ್ತಿಗಿಂತ ಶೇ. 273 ಅಧಿಕವೆನಿಸಿದೆ.
ಬಿಸಿಸಿಐನಿಂದ 125 ಕೋಟಿ ರೂ. ಬಹುಮಾನ?
ಕಳೆದ ವರ್ಷ ಭಾರತದ ಪುರುಷರ ತಂಡ ಐಸಿಸಿ ಟಿ20 ವಿಶ್ವಕಪ್ ಗೆದ್ದಾಗ ಬಿಸಿಸಿಐ 125 ಕೋಟಿ ರೂ. ಬಹುಮಾನ ನೀಡಿತ್ತು. ಬಿಸಿಸಿಐನ ಸಮಾನ ವೇತನ ಪಾಲಿಸಿಯ ಅನ್ವಯ ಈ ಬಾರಿ ಮಹಿಳಾ ತಂಡ ವಿಶ್ವಕಪ್ ಗೆದ್ದರೂ ಅಷ್ಟೇ ಮೊತ್ತದ ಬಹುಮಾನವನ್ನು ವಿತರಿಸುವ ನಿರೀಕ್ಷೆ ಇದೆ. ಇನ್ನು ಐತಿಹಾಸಿಕ ಗೆಲುವಿನೊಂದಿಗೆ ಫೈನಲ್ಗೇರಿರುವ ಹರ್ಮಾನ್ಪ್ರೀತ್ ಕೌರ್ ಪಡೆ, ರನ್ನರ್ಅಪ್ಗೆ ತೃಪ್ತಿಪಟ್ಟರೂ ಬಿಸಿಸಿಐನಿಂದ ಬಹುಮಾನ ಗಳಿಸುವ ಸಾಧ್ಯತೆ ಇದೆ. ಯಾಕೆಂದರೆ 2017ರ ವಿಶ್ವಕಪ್ ಫೈನಲ್ನಲ್ಲಿ ಸೋತಾಗ ಎಲ್ಲ ಆಟಗಾರ್ತಿಯರಿಗೆ ಬಿಸಿಸಿಐ ತಲಾ 50 ಲಕ್ಷ ರೂ. ನೀಡಿತ್ತು.
ಬೆಂಗಳೂರಿನಲ್ಲಿ ನಡೆಯಬೇಕಿತ್ತು ಫೈನಲ್
ಟೂರ್ನಿಯ ಉದ್ಘಾಟನಾ ಪಂದ್ಯದೊಂದಿಗೆ ಫೈನಲ್ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಬೇಕಿತ್ತು. ಆದರೆ ಕಳೆದ ಜೂನ್ನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಿಂದಾಗಿ, ಮಹಿಳಾ ವಿಶ್ವಕಪ್ ಆತಿಥ್ಯಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು. ಇದರಿಂದಾಗಿ ಕೊನೇಕ್ಷಣದಲ್ಲಿ ಆತಿಥ್ಯ ಕೈತಪ್ಪಿತ್ತು. ಇದರಿಂದಾಗಿ ಬೆಂಗಳೂರಿನ ಜನರಿಗೆ ಈಗ ಭಾರತ ತಂಡದ ಫೈನಲ್ ವೀಕ್ಷಿಸುವ ಅವಕಾಶವೂ ತಪ್ಪಿದೆ.