

ಪಾಟ್ನಾ: ಬಿಹಾರ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೂ ನಾಲ್ಕು ದಿನ ಇರುವಾಗಲೇ ಜನ್ ಸುರಾಜ್ ಪಕ್ಷದ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮೊಕಾಮಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ಪೊಲೀಸರು ಶನಿವಾರ(ನ. 01) ಬಂಧಿಸಿದ್ದಾರೆ(Arrested) ಎಂದು ವರದಿಯಾಗಿದೆ.
ದುಲಾರ್ ಚಂದ್ ಯಾದವ್ ಹತ್ಯೆಯಾದ ಜೆಎಸ್ಪಿ ಕಾರ್ಯಕರ್ತ. ಈ ಹಿಂದೆ ಆರ್ಜೆಡಿ ಜೊತೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಪ್ರಸ್ತುತ ಅವರ ಸೋದರಳಿಯ ಪ್ರಿಯದರ್ಶಿ ಪಿಯೂಷ್, ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷದಿಂದ ಮೊಕಾಮಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರಿಂದ ಅವರ ಪರ ಪ್ರಚಾರ ಮಾಡ್ತಿದ್ದ ವೇಳೆ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಇನ್ನೂ ಈ ಕುರಿತು ಸುದ್ದಿಗೋಷ್ಠ ನಡೆಸಿ ಮಾಹಿತಿ ನೀಡಿರುವ ಪಾಟ್ನಾದ ಎಸ್‌ಎಸ್‌ಪಿ ಕಾರ್ತಿಕೇಯ ಶರ್ಮಾ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ತ್ಯಾಗರಾಜನ್.ಎಸ್.ಎಂ, ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಡರಾತ್ರಿ ಪಾಟ್ನಾ ಬಳಿಯ ಬರ್ಹ್‌ನಲ್ಲಿರುವ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಅವರ ನಿವಾಸದಲ್ಲೇ ಅವರನ್ನು ಮತ್ತು ಸಹಚರರಾದ ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್ ಎಂಬುವರನ್ನು ಸುಮಾರು 150 ಸಿಬ್ಬಂದಿಯನ್ನು ಒಳಗೊಂಡ ಬೃಹತ್ ಪೊಲೀಸ್ ಕಾರ್ಯಾಚರಣೆ ಮೂಲಕ ಬಂಧಿಸಲಾಗಿದೆ. ವಿಚಾರಣೆಗಾಗಿ ಪಾಟ್ನಾಗೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅ. 30ರಂದು ಜೆಡಿಯು ಮತ್ತು ಜೆಎಸ್ಪಿ ಅಭ್ಯರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಕಲ್ಲು ತೂರಾಟ ನಡೆದ ಪರಿಣಾಮ ಗಾಯಗಳಾದವು. ಈ ವೇಳೆ ಅದೇ ಗ್ರಾಮದ 75 ವರ್ಷ ವಯಸ್ಸಿನ ದುಲಾರ್‌ಚಂದ್ ಯಾದವ್ ಕೊಲೆಯಾಗಿದ್ದರು. ಅವರ ಶವವನ್ನು ವಶಪಡಿಸಿಕೊಳ್ಳಲಾಗಿದೆ. ಎರಡೂ ಕಡೆಯವರು ಪ್ರಕರಣಗಳನ್ನು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದ ಬಳಿಕ ಪುರಾವೆಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಹಾಗೂ ಮೃತರ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂದು ಕಂಡು ಬಂದಿದೆ. ಇದೆಲ್ಲವೂ ಪ್ರಕರಣದ ಪ್ರಮುಖ ಆರೋಪಿಯೂ ಆಗಿರುವ ಅಭ್ಯರ್ಥಿ ಅನಂತ್ ಸಿಂಗ್ ಅವರ ಸಮ್ಮುಖದಲ್ಲಿ ನಡೆದಿದೆ. ಹಾಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಕಾರ್ತಿಕೇಯ ಶರ್ಮಾ ಹೇಳಿದ್ದಾರೆ.(ಏಜೆನ್ಸೀಸ್)