ಸಾರಿಗೆ ಇಲಾಖೆ ಉದ್ಯೋಗಿಗಳ ಸಂಬಳಕ್ಕೆ ಸಮಸ್ಯೆ ಆಗುವುದಿಲ್ಲ: ಸಚಿವರ ಅಭಯ

Ramalinga Reddy
Published on

ಬೆಂಗಳೂರು: ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಸಾರಿಗೆ ಸಂಸ್ಥೆಗೆ ಹಣದ ಮುಗ್ಗಟ್ಟು ಉಂಟಾಗಿ, ಸಾರಿಗೆ ಇಲಾಖೆಯ ಉದ್ಯೋಗಿಗಳಿಗೆ ಮುಂದಿನ ತಿಂಗಳು ಸಂಬಳ ಕೊಡುವುದಕ್ಕೂ ಕಷ್ಟವಾಗಲಿದೆ ಎಂಬ ಆರೋಪಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿದ್ದಾರೆ.

‘ಶಕ್ತಿ’ ಹೆಸರಿನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಸರ್ಕಾರ ಅವಕಾಶ ನೀಡಿರುವುದರಿಂದ ಸರ್ಕಾರವೇ ಅದರ ಸಂಪೂರ್ಣ ವೆಚ್ಚವನ್ನು ಭರಿಸಲಿದೆ. ಯಾವುದೇ ಕಾರಣಕ್ಕೂ ಸಾರಿಗೆ ಇಲಾಖೆಗೆ ಹಣ ಪಾವತಿ ವಿಳಂಬವಾಗುವುದಿಲ್ಲ. ಹಾಗಾಗಿ ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಬರುತ್ತದೆ. ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಸುದ್ದಿಗಾರರಿಗೆ ತಿಳಿಸಿದರು.

ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವ ವಿಷಯದಲ್ಲಿ ಸರ್ಕಾರಕ್ಕಾಗಲಿ, ನಿಗಮಗಳಿಗಾಗಲಿ ಆರ್ಥಿಕವಾಗಿ ಲಾಭವಾಗುತ್ತದೆಯೇ, ನಷ್ಟವಾಗುತ್ತದೆಯೇ ಎಂಬುದರ ಲೆಕ್ಕಾಚಾರ ಹಾಕಬಾರದು. ಅದು ಮಹಿಳೆಯರ ಪರವಾದ ಒಂದು ಜನಪ್ರಿಯ ಯೋಜನೆ. ಅದಲ್ಲದೇ ಸಾರಿಗೆ ಇಲಾಖೆಯವರು ರಾಜ್ಯ ಸರ್ಕಾರದಿಂದ ಬರುವ ಹಣವನ್ನೇ ನೆಚ್ಚಿ ಕುಳಿತುಕೊಳ್ಳುವ ಅವಶ್ಯಕತೆಯೂ ಇಲ್ಲ. ಇಲಾಖೆಯ ಸಂಪನ್ಮೂಲಗಳಿಂದಲೂ ಸಾಕಷ್ಟು ಆದಾಯ ಬರುತ್ತಿದೆ. ನಾಲ್ಕೂ ನಿಗಮಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಬಸ್ ಚಾಲಕರು, ನಿರ್ವಾಹಕರು ಸೇರಿದಂತೆ ಸಾರಿಗೆ ಇಲಾಖೆಯ ಯಾವುದೇ ಉದ್ಯೋಗಿಗಳ ಸಂಬಳಕ್ಕೂ ತೊಂದರೆ ಆಗುವುದಿಲ್ಲ. ಸರಿಯಾದ ಸಮಯಕ್ಕೇ ಸಂಬಳ ಬರುತ್ತದೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net