

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಆರೋಪ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಸರಣಿ ಟ್ವೀಟ್ ಮುಖೇನ ತಿರುಗೇಟು ನೀಡಿದ್ದಾರೆ.
"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಎಚ್ಡಿಕೆ ಅವರ ನಿದ್ರೆ-ನೆಮ್ಮದಿ ಹಾರಿ ಹೋಗಿದೆ. ಹತಾಶೆಯ ಕೂಪದಲ್ಲಿ ಬಿದ್ದು ವಿಲ ವಿಲ ಒದ್ದಾಡುತ್ತಿರುವ ಕುಮಾರಸ್ವಾಮಿ, ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದ್ಯಾಕೆ?" ಎಂದು ಟ್ವೀಟ್ ಮಾಡಿದ್ದಾರೆ.
"ಎಚ್ಡಿಕೆ ಅವರು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಲು ಒಮ್ಮೆ ಪೆನ್‌ಡ್ರೈವ್ ತೋರಿಸುತ್ತಾರೆ, ಮತ್ತೊಮ್ಮೆ ಸಿಡಿ ತೋರಿಸುತ್ತಾರೆ. ನಿಜವಾಗಿಯೂ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿಯವರ ಕೈಯನ್ನು ನಾವ್ಯಾರು ಕಟ್ಟಿ ಹಾಕಿಲ್ಲ. ಪದೇ ಪದೇ ತೋಳ ಬಂತು ತೋಳದ ಕಥೆಯ ಕಥಾನಾಯಕನ ರೀತಿ ವರ್ತಿಸಿದರೆ ಹೆದರುವವರು ಯಾರು?" ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
"ಎಚ್ಡಿಕೆ ಚುನಾವಣೆಗೂ ಮುನ್ನ 'ಕಿಂಗ್ ಮೇಕರ್' ಆಗುವ ಕನಸು ಕಂಡಿದ್ದರು. ಆದರೆ ಜನರು ಚುನಾವಣೆಯಲ್ಲಿ ಅವರ 'ಕಿಂಗ್ ಮೇಕರ್' ಕನಸನ್ನು ನುಚ್ಚುನೂರು ಮಾಡಿದರು. ಕುಮಾರಸ್ವಾಮಿ ಕನಸು ಭಗ್ನಗೊಂಡ, ಭಗ್ನಪ್ರೇಮಿಯಂತೆ ವ್ಯಗ್ರರಾಗಿದ್ದಾರೆ. ಹಾಗಾಗಿ ಬಾಯಿಗೆ ಬಂದಂತೆ ನಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ" ಎಂದು ಸರಣಿ ಟ್ವೀಟ್ ಮಾಡುವ ಮುಖೇನ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.