

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ವಿದ್ಯುತ್ ಪರಿವರ್ತಕದ ನೆಪದಲ್ಲಿ ಗ್ರಾಪಂ ಸದಸ್ಯರ ಹೊಸಮನೆಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸತಾಯಿಸುತ್ತಿರುವ ಪಡುಬಿದ್ರಿ ಮೆಸ್ಕಾಂ ಶಾಖೆ ಸಹಾಯಕ ಅಭಿಯಂತರನ್ನು ತರಾಟೆಗೆ ತೆಗದುಕೊಂಡ ಘಟನೆ ಕಾಪು ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಬುಧವಾರ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ನಡೆಯಿತು.
ತೆಂಕ ಗ್ರಾಮದ ಸಂತೋಷ್ ಅವರು ಪ್ರತಿನಿಧಿಸುತ್ತಿರುವ ವಾರ್ಡ್ನಲ್ಲಿ ಲೋವೋಲ್ಟೆಜ್ ಸಮಸ್ಯೆಗೆ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಗ್ರಾಮಸ್ಥರ ಪರವಾಗಿ ಮೆಸ್ಕಾಂಗೆ ಈ ಹಿಂದೆ ಬೇಡಿಕೆ ಸಲ್ಲಿಸಿದ್ದರು. ಅದು ಈವರೆಗೂ ಈಡೇರಿಲ್ಲ. ಇತ್ತೀಚೆಗೆ ಹೊಸಮನೆ ಕಟ್ಟಿಸಿದ್ದ ಸಂತೋಷ್ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದು, ಲೋವೋಲ್ಟೇಜ್ ನೆಪದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸತಾಯಿಸುತ್ತಿರುವ ಮೆಸ್ಕಾಂ ಶಾಖಾಧಿಕಾರಿ ಕ್ರಮಕ್ಕೆ ತೆಂಕ ಗ್ರಾಪಂ ಮಾಜಿ ಉಪಾಧ್ಯಕ್ಷೆ ಜಯಶ್ರೀ ಅವರು ಸಂತೋಷ್ರೊಂದಿಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಧ್ಯಪ್ರವೇಶಿಸಿದ ಮೆಸ್ಕಾಂ ಉಡುಪಿ ವೃತ್ತ ಕಚೇರಿ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯಾಯ ಶಾಖಾಧಿಕಾರಿಗೆ ತಕ್ಷಣ ಸಂಪರ್ಕ ನೀಡುವಂತೆ ಸೂಚನೆ ನೀಡಿದರು.
ವಿಸ್ತಾರವಾಗಿರುವ ಕಾಪು ಉಪವಿಭಾಗ ವ್ಯಾಪ್ತಿಯಲ್ಲಿ 5 ಶಾಖೆಗಳಿದ್ದು, ಶಿರ್ವ ಶಾಖೆ ವಿಭಜಿಸಿಯನ್ನು ಹೊಸದಾಗಿ ಶಂಕರಪುರ ಮತ್ತು ಪಡುಬಿದ್ರಿ ಶಾಖೆ ವಿಸ್ತರಿಸಿ ಪಡುಬಿದ್ರಿ ಉಪವಿಭಾಗ ರಚಿಸುವಂತೆ ಹಾಗೂ ಪವರ್ಮನ್ಗಳ ನೇಮಕಕ್ಕೆ ಈಗಿರುವ ಶೇ.75 ಅಂಕದ ಮಾನದಂಡವನ್ನು ಶೇ.50ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆ.ಆರ್.ಪಾಟ್ಕರ್ ಹಾಗೂ ಗುತ್ತಿಗೆದಾರ ನಾಗರಾಜ ಭಟ್ ಪಾಂಗಾಳ ಒತ್ತಾಯಿಸಿದರು. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ದಿನೇಶ್ ತಿಳಿಸಿದರು.
ಪಡುಬಿದ್ರಿಯಲ್ಲಿ ಸ್ವಂತ ನಿವೇಶನವಿದ್ದರೂ ಬಾಡಿಗೆ ಕಟ್ಟಡದಲ್ಲಿ ಮೆಸ್ಕಾಂ ಕಚೆೇರಿ ನಿರ್ವಹಣೆಯಾಗುತ್ತಿರುವ ಬಗ್ಗೆ ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರ ದೂರಿದರು. ಪಡುಬಿದ್ರಿಯಲ್ಲಿ 33/11 ಕೆವಿ ಉಪಕೇಂದ್ರ ನಿರ್ಮಾಣದ ಪ್ರಸ್ತಾವನೆಯಿದೆ. ಉಪಕೆಂದ್ರ ನಿರ್ಮಾಣವಾದ ಬಳಿಕ ಜಾಗ ಉಳಿದರೆ ಕಚೇರಿ ರಚನೆಗೂ ಒತ್ತು ನೀಡಲಾಗುವುದು ಎಂದು ದಿನೇಶ್ ಉಪಾಧ್ಯಾಯ ವಿವರಿಸಿದರು.
ಮೆಸ್ಕಾಂ ಉಡುಪಿ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನಕುಮಾರ್, ಮೆಸ್ಕಾಂ ಉಡುಪಿ ವೃತ್ತ ಕಚೇರಿ ಉಪಲೆಕ್ಕ ನಿಯಂತ್ರಾನಾಧಿಕಾರಿ ರಮೇಶ್, ಕಾಪು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅರವಿಂದ್ ಕೆ.ಎಸ್., ಸಹಾಯಕ ಇಂಜಿನಿಯರ್ ಆನಂದ್ ಎಸ್. ಮತ್ತಿತರರು ಉಪಸ್ಥಿತರಿದ್ದರು.
ಕಚೇರಿ ರಚನೆಗೂ ಒತ್ತು
ಪಡುಬಿದ್ರಿಯಲ್ಲಿ ಸ್ವಂತ ನಿವೇಶನವಿದ್ದರೂ ಬಾಡಿಗೆ ಕಟ್ಟಡದಲ್ಲಿ ಮೆಸ್ಕಾಂ ಕಚೆೇರಿ ನಿರ್ವಹಣೆಯಾಗುತ್ತಿರುವ ಬಗ್ಗೆ ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರ ದೂರಿದರು. ಪಡುಬಿದ್ರಿಯಲ್ಲಿ 33/11 ಕೆವಿ ಉಪಕೇಂದ್ರ ನಿರ್ಮಾಣದ ಪ್ರಸ್ತಾವನೆಯಿದೆ. ಉಪಕೆಂದ್ರ ನಿರ್ಮಾಣವಾದ ಬಳಿಕ ಜಾಗ ಉಳಿದರೆ ಕಚೇರಿ ರಚನೆಗೂ ಒತ್ತು ನೀಡಲಾಗುವುದು ಎಂದು ದಿನೇಶ್ ಉಪಾಧ್ಯಾಯ ವಿವರಿಸಿದರು.
35 ಲಕ್ಷ ರೂ. ಕಾಮಗಾರಿಗೆ ಚಾಲನೆ
ಬಂಟಕಲ್ಲು ವ್ಯಾಪ್ತಿಯಲ್ಲಿ ಹಳೆಯ ವಿದ್ಯುತ್ ತಂತಿ ಅಪಾಯಕಾರಿಯಾಗಿವೆ. ಇವುಗಳನ್ನು ಬದಲಾಯಿಸುವಂತೆ ಜನಸಂಪರ್ಕ ಸಭೆಯಲ್ಲಿ ಅಹವಾಲು ಮಂಡಿಸಿದರೂ ಪ್ರಯೋಜನವಾಗಿಲ್ಲ, ಶಿರ್ವ ಶಾಖೆಗೆ ಹೆಚ್ಚುವರಿ ಪವರ್ಮನ್ಗಳನ್ನು ನಿಯೋಜಿಸುವಂತೆ ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಆಗ್ರಹಿಸಿದರು. ಶಿರ್ವ ಶಾಖಾ ವ್ಯಾಪ್ತಿಯಲ್ಲಿ 2023-24ರ ಕ್ರಿಯಾಯೋಜನೆಯಲ್ಲಿ 35 ಲಕ್ಷ ರೂ. ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅವು ಪ್ರಗತಿಯಲ್ಲಿವೆ. ಹೆಚ್ಚುವರಿ ಪವರ್ಮನ್ಗಳ ನಿಯೋಜನೆಗೆ ಸಂಬಂಧಿಸಿ ಈಗಾಗಲೇ ಮಳೆಗಾಲದ ತುರ್ತು ಕೆಲಸಗಳಿಗಾಗಿ ಮಾನ್ಸೂನ್ ಗ್ಯಾಂಗ್ಮನ್ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.