

ಸುದೀಪ್ ಅವರ ವೃತ್ತಿ ಬದುಕಿನಲ್ಲೇ ಅವರಿಗೆ ತುಂಬಾ ದೊಡ್ಡ ಹೆಸರು ತಂದುಕೊಟ್ಟ ಎರಡು ಚಿತ್ರಗಳೆಂದರೆ, ಅದು 'ಹುಚ್ಚ' ಮತ್ತು ತೆಲುಗಿನ 'ಈಗ'. ಈ ಎರಡೂ ಚಿತ್ರಗಳು ಸುದೀಪ್ ಎಂಥಾ ಪ್ರತಿಭಾವಂತ ಅಂತ ತೋರಿಸಿಕೊಟ್ಟಿದ್ದಷ್ಟೇ, ಅವರಿಗೆ ದೊಡ್ಡ ಹೆಸರು ನೀಡಿತು.
ಈಗ್ಯಾಕೆ ಈ ಚಿತ್ರಗಳ ವಿಷಯ ಎಂಬ ಪ್ರಶ್ನೆ ಬರಬಹುದು. ವಿಷಯ ಏನೆಂದರೆ, ಈ ಎರಡೂ ಚಿತ್ರಗಳು ಬಿಡುಗಡೆಯಾಗಿದ್ದು ಇದೇ ದಿನ. ಜುಲೈ 6ರಂದು ಸುದೀಪ್ ಅವರ ಎರಡು ಮಹತ್ವದ ಚಿತ್ರಗಳು ಬಿಡುಗಡೆಯಾಗಿದ್ದವು ಎಂಬುದು ವಿಶೇಷ.
ಇದನ್ನೂ ಓದಿ: ರಾಮ್ಚರಣ್ ಚಿತ್ರಕ್ಕೆ ಪವನ್ ಕಲ್ಯಾಣ್ ಬಂಡವಾಳ
ಈ ಪೈಕಿ 'ಹುಚ್ಚ' ಚಿತ್ರವು ಇಂದಿಗೆ ಬಿಡುಗಡೆಯಾಗಿ 19 ವರ್ಷಗಳಾಗಿವೆ. ಸುದೀಪ್, ಕನ್ನಡ ಚಿತ್ರರಂಗಕ್ಕೆ 'ತಾಯವ್ವ' ಎಂಬ ಚಿತ್ರದ ಮೂಲಕ ಎಂಟ್ರಿ ಕೊಟ್ಟರೂ, ಅವರಿಗೆ ಜನಪ್ರಿಯತೆ ಮತ್ತು ಯಶಸ್ಸು ತಂದುಕೊಟ್ಟಿದ್ದು ಓಂಪ್ರಕಾಶ್ ರಾವ್ ನಿರ್ದೇಶನದ 'ಹುಚ್ಚ' ಚಿತ್ರ. ತಮಿಳಿನ 'ಸೇತು' ಚಿತ್ರದ ರೀಮೇಕ್ ಆಗಿರುವ 'ಹುಚ್ಚ' ಚಿತ್ರದ ನಂತರ ಅವರು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಸ್ಟಾರ್ ಆದರು.
ಇನ್ನು ಎಸ್.ಎಸ್. ರಾಜಮೌಳಿ ನಿರ್ದೇಶನದ 'ಈಗ' ಬಿಡುಗಡೆಯಾಗಿ 8 ವರ್ಷ ಕಳೆದಿವೆ. ಅದಕ್ಕೂ ಮುನ್ನ ಸುದೀಪ್ ಹಿಂದಿಯಲ್ಲಿ 'ಫೂಂಖ್' ಮತ್ತು 'ರಣ್' ಚಿತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಗಳಲ್ಲಿನ ಅವರ ಅಭಿನಯ ನೋಡಿ ಮೆಚ್ಚಿಕೊಂಡಿದ್ದ ರಾಜಮೌಳಿ, ತಮ್ಮ 'ಈಗ' ಚಿತ್ರದಲ್ಲೊಂದು ಪ್ರಮುಖ ಪಾತ್ರ ಕೊಟ್ಟಿದ್ದರು. ಈ ಚಿತ್ರದ ನಂತರ ಸುದೀಪ್ ಪ್ಯಾನ್ ಇಂಡಿಯಾ ಸ್ಟಾರ್ ಆದರು.
ತಮ್ಮ ವೃತ್ತಿಜೀವನದ ಎರಡು ಮಹತ್ವದ ಚಿತ್ರಗಳನ್ನು ಸುದೀಪ್ ಇಂದು ನೆನಪಿಸಿಕೊಂಡಿದ್ದಾರೆ. ಆ ಎರಡೂ ಚಿತ್ರಗಳು ತಮ್ಮ ಪಾಲಿಗೆ ಒಂದು ಮರೆಯಲಾಗದ ಅನುಭವ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರಗಳಲ್ಲಿ ತಮಗೆ ಅವಕಾಶ ಮಾಡಿಕೊಟ್ಟ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, ''ಹುಚ್ಚ' ಬಿಡುಗಡೆಯಾಗಿ 19 ವರ್ಷ. 'ಈಗ' ಎಂಟು ವರ್ಷಗಳನ್ನು ಮುಗಿಸಿವೆ. ಈ ಚಿತ್ರಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈ ಎರಡೂ ಚಿತ್ರಗಳು ನಾನೇನು ಎಂದು ತೋರಿಸಿಕೊಟ್ಟಿವೆ ಹಾಗೆಯೇ ನನಗೆ ಪುನರ್ಜನ್ಮ ನೀಡಿವೆ. ಈ ಎರಡೂ ಚಿತ್ರಗಳಲ್ಲಿ ನನಗೆ ಅವಕಾಶ ಕೊಟ್ಟ ಮತ್ತು ಒಳ್ಳೆಯ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಾಡಿದವರಿಗೆ ನನ್ನ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.