

ಭೋಪಾಲ್: ಸಾಧಿಸುವ ಛಲವೊಂದಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವ ಮಾತಿಗೆ ಈ ಒಂದು ವ್ಯಕ್ತಿ ತಾಜಾ ಉದಾಹರಣೆ ಆಗಿದ್ದಾರೆ. ತುಂಬಾ ಓದಿದ್ದೇನೆ. ನನಗೆ ಸರಿಸಮನಾದ ಕೆಲಸ ಸಿಗುತ್ತಿಲ್ಲ ಎಂದು ಕೈಕಟ್ಟಿ ಕುಳಿತರೆ ಏನು ಸಾಧಿಸಲಾಗದು. ನಮ್ಮಲ್ಲಿರುವ ಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಮಧ್ಯ ಪ್ರದೇಶದ ಪ್ರಫುಲ್ ಬಿಲ್ಲೋರ್ ಸಾಕ್ಷಿಯಾಗಿದ್ದಾರೆ.
ಎಂಬಿಎ ಓದಿರುವ ಪ್ರಫುಲ್ ಯಾವುದೇ ಕೆಲಸ ಸಿಗಲಿಲ್ಲ ಎಂದು ಕೊರಗದೆ ತಮ್ಮಲ್ಲಿರುವ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡು ಇಂದು ಮಿಲಿಯನೇರ್ ಆಗಿದ್ದಾರೆ. ಯಾವುದೇ ಕೆಲಸವಾಗಲಿ ಚಿಕ್ಕದು, ದೊಡ್ಡದು ಎಂಬುದಿಲ್ಲ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಕಂಡಿತ ಎನ್ನುವ ಮಾತನ್ನು 22 ವರ್ಷದ ಪ್ರಫುಲ್ ನಿರೂಪಿಸಿದ್ದಾರೆ. ಟೀ ಮಾರಿಯೇ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದಾರೆ.
ಮಧ್ಯಪ್ರದೇಶದ ಪ್ರಫುಲ್ ಸದ್ಯ ಗುಜರಾತ್ನ ಅಹಮದಾಬಾದ್ನಲ್ಲಿ ನೆಲೆಸಿದ್ದು, ದೇಶಾದ್ಯಂತ ಎಂಬಿಎ ಚಾಯ್ವಾಲಾ ಎಂದೇ ಪ್ರಖ್ಯಾತಿ ಆಗಿದ್ದಾರೆ. ಬರೋಬ್ಬರಿ 3 ಕೋಟಿ ರೂ. ವಹಿವಾಟು ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಸಿಎಟಿ ಅಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗದಿದ್ದಾಗ ಅಧ್ಯಯನವನ್ನು ಅರ್ಧಕ್ಕೆ ಬಿಡಲು ನಿರ್ಧರಿಸುತ್ತಾರೆ. ಕೊನೆಗೆ ಒಂದು ನಿರ್ಧಾರಕ್ಕೆ ಬರುವ ಪ್ರಫುಲ್ ಬೀದಿ ಬದಿಯಲ್ಲಿ ಟೀ ಮಾರಾಟ ಮಾಡಲು ಆರಂಭಿಸುತ್ತಾರೆ. ಇದಕ್ಕೂ ಮುನ್ನ ಅಹಮದಾಬಾದ್ನ ರೆಸ್ಟೋರೆಂಟ್ ಒಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿರುತ್ತಾರೆ.
ಇದೇ ವೇಳೆ ಟೀ ಮಾಡುವುದನ್ನು ಚೆನ್ನಾಗಿ ಕಲಿಯುವ ಪ್ರಫುಲ್ ಕೊನೆಗೆ ತನ್ನದೇ ಸ್ವಂತ ಟೀ ಶಾಪ್ ತೆರೆಯುತ್ತಾರೆ. ವ್ಯವಹಾರದ ಮೊದಲ ದಿನ, ಹಾಲನ್ನು ಹಾಳು ಮತ್ತು ಹೆಚ್ಚಿನ ಸಕ್ಕರೆ ಹಾಕುವ ಮೂಲಕ ಕೇವಲ ಒಂದು ಕಪ್ ಚಹಾವನ್ನು ಮಾತ್ರ ಪ್ರಫುಲ್ ಮಾರಾಟ ಮಾಡುತ್ತಾರೆ.
ಇದಾದ ಬಳಿಕ ದಿನ ಕಳೆದಂತೆ ಟೀ ಮಾಡುವುದರಲ್ಲಿ ಪ್ರಫುಲ್ ನಿಸ್ಸೀಮರಾಗುತ್ತಾರೆ. ವ್ಯವಹಾರ ಚೆನ್ನಾಗಿಯೇ ನಡೆಯಲು ಆರಂಭಿಸುತ್ತದೆ. ಆರಂಭದಲ್ಲಿ ಒಂದು ತಿಂಗಳಿಗೆ 15 ಸಾವಿರ ಸಂಪಾದನೆ ಮಾಡುತ್ತಿರುತ್ತಾರೆ. ಇದರ ನಡುವೆಯೇ ಕುಟುಂಬದ ವಿರೋಧದ ನಡುವೆಯೂ ಎಂಬಿಎಗೆ ಪ್ರಫುಲ್ ಗುಡ್ ಬೈ ಹೇಳುತ್ತಾರೆ.
ಇದಾದ ಬಳಿಕ ಸಾಕಷ್ಟು ಹೋರಾಟ ಮಾಡುವ ಪ್ರಫುಲ್ ಅಂತಿಮವಾಗಿ ತನ್ನ ಕೆಲಸದಲ್ಲಿ ಯಶಸ್ಸು ಗಳಿಸುತ್ತಾರೆ. ಇದೀಗ ವರ್ಷಕ್ಕೆ 3 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. ಇವರ ಯಶಸ್ಸಿನ ಕತೆಯನ್ನು ಇತ್ತೀಚೆಗಷ್ಟೇ ಹ್ಯೂಮನ್ಸ್ ಆಫ್ ಬಾಂಬೆ ಎಂಬ ಜಾಲತಾಣದಲ್ಲಿ ಶೇರ್ ಮಾಡಿದ್ದು, ಪ್ರಫುಲ್ ಅವರಿಗೆ ಸಾಕಷ್ಟು ಮೆಚ್ಚುಗೆ ಮಹಾಪೂರವೇ ಹರಿಯುತ್ತಿದೆ. (ಏಜೆನ್ಸೀಸ್)