Murder Case: ಪ್ರಿಯಕರನ ಜತೆ ಪ್ರೇಮ ಸಲ್ಲಾಪ ನಡೆಸಲು ಅಡ್ಡಿಯಾಗಿದ್ದ ಪತಿಯನ್ನು ಭೀಕರವಾಗಿ ಹತ್ಯೆಗೈದ ಪಾಪಿ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್, ಸೌರಭ್ ರಜಪುತ್ನನ್ನು 15 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಡ್ರಮ್ನಲ್ಲಿರಿಸಿ, ಅದರ ಮೇಲೆ ಸಿಮೆಂಟ್ನಿಂದ ಮುಚ್ಚಿಟ್ಟ ಘಟನೆ ಸದ್ಯ ಮೀರತ್ ಜನರನ್ನು ಬೆಚ್ಚಿಬೀಳಿಸಿದೆ.
ಪುತ್ರಿ ಕಂಡಿದ್ದೇ ಸತ್ಯ
ಉತ್ತರಪ್ರದೇಶ ಮೀರತ್‌ನ ಸೌರಭ್ ರಜಪೂತ್ ದೇಹ ಡ್ರಮ್ನಲ್ಲಿದೆ ಎಂಬುದನ್ನು ಪತ್ತೆಹಚ್ಚಿದ್ದೇ ಅವರ ಆರು ವರ್ಷದ ಮಗಳು. ತಾಯಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ, ಸೌರಭ್ನನ್ನು ಕೊಲೆಗೈದು ತಂದೆಯನ್ನು ಡ್ರಮ್ನಲ್ಲಿ ಸಿಮೆಂಟ್ನಿಂದ ಮುಚ್ಚಿರುವುದನ್ನು ಸೌರಭ್ ಪುತ್ರಿ ಕಣ್ಣಾರೆ ನೋಡಿದ್ದಳು. ಆದರೆ, ಪುತ್ರಿ ಚಿಕ್ಕವಳಾದ ಹಿನ್ನಲೆ ಆಕೆಯ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮನೆಯಲ್ಲಿ ಸೌರಭ್ ಕಾಣುತ್ತಿಲ್ಲ ಎಂದು ಅವರ ತಾಯಿ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಗನನ್ನು 15 ತುಂಡುಗಳಾಗಿ ಮಾಡಿ, ಮನೆಯಲ್ಲಿದ್ದ ಡ್ರಮ್ನೊಳಗಿಟ್ಟು, ಅದರ ಮೇಲೆ ಸಿಮೆಂಟ್ನಿಂದ ಮುಚ್ಚಿದ ಸಂಗತಿ ತಿಳಿದು ತಾಯಿ ಕಣ್ಣೀರಿಟ್ಟಿದ್ದಾರೆ.
ಹೆತ್ತೊಡಲು ಕಣ್ಣೀರು
ಅಸಲಿಗೆ ಪ್ರಿಯಕರ ಸಾಹಿಲ್ ಜತೆಗೆ ಸೇರಿ, ಪತಿಯನ್ನು ಭೀಕರವಾಗಿ ಹತ್ಯೆಗೈದು, ದೇಹವನ್ನು 15 ತುಂಡು ಮಾಡಿದ ಮುಸ್ಕಾನ್, ಭಾಗಗಳನ್ನು ಡ್ರಮ್ನಲ್ಲಿರಿಸಿ, ಸಿಮೆಂಟ್ನಿಂದ ಮುಚ್ಚಿದ್ದಲ್ಲದೇ, ತಾನು ಮಾಡಿರುವ ಪಾಪ ಕೃತ್ಯದ ಬಗ್ಗೆ ಕಿಂಚಿತ್ತು ಪಶ್ಚಾತಾಪ, ಭಯವಿಲ್ಲದೇ ಪ್ರಿಯಕರನೊಂದಿಗೆ ಹಿಮಾಚಲಕ್ಕೆ ಪ್ರಯಾಣ ಬೆಳೆಸಿದ್ದಳು. ಕೊಲೆಗೈದ ಬೆನ್ನಲ್ಲೇ ಸಾಹಿಲ್ ಜತೆಗೆ ಪ್ರವಾಸದ ನೆಪದಲ್ಲಿ ಮನೆಯಿಂದ ಹೊರಹೋದ ಮುಸ್ಕಾನ್, ಹಿಮಾಚಲದಲ್ಲಿ ಸಾಹಿಲ್ನೊಟ್ಟಿಗೆ ರೀಲ್ಸ್, ಮೋಜು-ಮಸ್ತಿ ಮಾಡಿದ್ದಾಳೆ.
ಇದನ್ನೂ ಓದಿ: Karnataka Bandh | ಕೆ.ಆರ್ ಮಾರ್ಕೆಟ್ನಲ್ಲಿ ಎಂದಿನಂತೆ ಜನಸಂದಣಿ!
ಪಾರ್ಟಿ, ಮೋಜು-ಮಸ್ತಿ
ಹಿಮಾಚಲ ಪ್ರದೇಶದಲ್ಲಿ ಇಬ್ಬರೂ ಪಾರ್ಟಿ ಮಾಡಿರುವುದು ಮೊಬೈಲ್ನಲ್ಲಿದ್ದ ವಿಡಿಯೋಗಳಿಂದ ಪತ್ತೆಯಾಗಿದೆ. ಸೌರಭ್ನ ಛಿದ್ರಗೊಂಡ ದೇಹದ ಭಾಗಗಳ ಮೇಲೆ ಆರೋಪಿ ಸಾಹಿಲ್ ಮಾಟಮಂತ್ರ ನಡೆಸಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಸಾಹಿಲ್ ಮಾಟ-ಮಂತ್ರ, ವಶೀಕರಣ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡುವುದರಲ್ಲಿ ನಿಸ್ಸೀಮನಾಗಿದ್ದ ಎನ್ನಲಾಗಿದೆ. ಪ್ರಸ್ತುತ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು, ಮುಸ್ಕಾನ್ ಮತ್ತು ಸಾಹಿಲ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ,(ಏಜೆನ್ಸೀಸ್).