Meerpet Murder case : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಮೀರ್‌ಪೇಟೆ ವೆಂಕಟ ಮಾಧವಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಗುರುಮೂರ್ತಿ ಒಬ್ಬನೇ ತನ್ನ ಪತ್ನಿ ಮಾಧವಿಯನ್ನು ಕೊಂದಿಲ್ಲ, ಆತನಿಗೆ ಮೂವರು ಮಂದಿ ಸಹಾಯ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಆ ಮೂವರಲ್ಲಿ ಒಬ್ಬಳು ಮಹಿಳೆ ಎಂಬ ಅನುಮಾನಗಳು ಮೂಡಿದೆ.
ಸದ್ಯ ಕೊಲೆಗೆ ಸಹಾಯ ಮಾಡಿದವರ ವಿವರಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಅಗತ್ಯವಿದ್ದರೆ ಗುರುಮೂರ್ತಿಯ ಮೇಲೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಪೊಲೀಸರು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣದ ಆರೋಪಿ ಗುರುಮೂರ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಆತನನ್ನು ರಿಮಾಂಡ್ ಮಾಡಿ ಜೈಲಿಗೆ ಕಳುಹಿಸಲಾಗಿದೆ. ಇದರ ನಡುವೆ ಮೀರ್‌ಪೇಟೆ ಪೊಲೀಸರು, ಗುರುಮೂರ್ತಿಯನ್ನು ತಮ್ಮ ಕಸ್ಟಡಿಗೆ ನೀಡುವಂತೆ ಅರ್ಜಿ ಸಲ್ಲಿಸಿ, ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ವಿಚಾರಣೆಗಾಗಿ ಆತನನ್ನು ಸರೂರ್‌ನಗರದ ಸಿಸಿಎಸ್ ಅಥವಾ ಅಬ್ದುಲ್ಲಾಪುರ್ಮೆಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಈ ತಿಂಗಳ 12 ರವರೆಗೆ ಗುರುಮೂರ್ತಿಯ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಇದೀಗ ಗುರುಮೂರ್ತಿ ಒಬ್ಬನೇ ಕೊಲೆ ಮಾಡಿಲ್ಲ, ಓರ್ವ ಮಹಿಳೆ ಸೇರಿ ಇತರೆ ಮೂವರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಏನಿದು ಪ್ರಕರಣ?
ಈ ಪ್ರಕರಣದ ಬಗ್ಗೆ ರಾಚಕೊಂಡ ಪೊಲೀಸ್ ಆಯುಕ್ತ ಸುಧೀರ್ ಬಾಬು ಮಾತನಾಡಿದ್ದು, ಸ್ಫೋಟಕ ಸಂಗತಿಗಳನ್ನು ತಿಳಿಸಿದ್ದಾರೆ. ಜ. 16 ರಂದು ಬೆಳಿಗ್ಗೆ 8 ಗಂಟೆಗೆ ಮಾಧವಿ ಎಚ್ಚರವಾದ ತಕ್ಷಣ ಮಾಧವಿ ಮತ್ತು ಗುರುಮೂರ್ತಿ ನಡುವೆ ಜಗಳ ನಡೆದಿದೆ. ಜಗಳದ ನಂತರ ಗುರುಮೂರ್ತಿ ಮಾಧವಿಯನ್ನು ಕೊಲ್ಲಲು ಮುಂದಾದನು. ಅದಕ್ಕಾಗಿಯೇ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಕೆನ್ನೆಗೆ ಬಾರಿಸಿ, ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ಇದರಿಂದ ಮಾಧವಿ ತಕ್ಷಣ ಪ್ರಜ್ಞೆ ಕಳೆದುಕೊಂಡಳು. ಬಳಿಕ ಕೊಲ್ಲುವ ಉದ್ದೇಶದಿಂದಲೇ ಗುರುಮೂರ್ತಿ ಆಕೆಯ ಕತ್ತು ಹಿಸುಕಿದ್ದಾನೆ. ಆಕೆ ಸತ್ತಿದ್ದಾಳೆ ಎಂದು ಗೊತ್ತಾದ ಕೂಡಲೇ ಮಾಧವಿಯ ದೇಹದಿಂದ ಬಟ್ಟೆಗಳನ್ನು ತೆಗೆದಿದ್ದಾನೆ. ಬಳಿಕ ಶವವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ, ಅಡುಗೆ ಮನೆಯಿಂದ ಹರಿತವಾದ ಆಯುಧ ತಂದನು ಎಂದು ಸಿಪಿ ಸುಧೀರ್ ಬಾಬು ಬಹಿರಂಗಪಡಿಸಿದರು.
ಗುರುಮೂರ್ತಿ ಮೊದಲು ಮಾಧವಿಯ ಭುಜಗಳನ್ನು ಕತ್ತರಿಸಿದನು. ಮೃತ ದೇಹದಿಂದ ಕೈಗಳನ್ನು ಬೇರ್ಪಡಿಸಿದನು. ನಂತರ ಕಾಲುಗಳನ್ನು ಮೃತ ದೇಹದಿಂದ ಬೇರ್ಪಡಿಸಿದನು. ಆನಂತರ ಕೈ-ಕಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿದನು. ಬಳಿಕ ತುಂಡುಗಳನ್ನು ನೀರು ತುಂಬಿದ ಬಕೆಟ್‌ನಲ್ಲಿ ಹಾಕಿ ವಾಟರ್ ಹೀಟರ್ ಆನ್ ಮಾಡಿ, ದೇಹದ ಭಾಗಗಳನ್ನು ಬೇಯಿಸಿದನು. ನಂತರ ಆ ಭಾಗಗಳನ್ನು ಬಕೆಟ್‌ನಿಂದ ಹೊರತೆಗೆದು ಒಲೆಯ ಮೇಲೆ ಹಾಕಿದನು. ಮಾಂಸವು ಸುಟ್ಟ ಬಳಿಕ ಮೂಳೆಗಳನ್ನು ಬೇರ್ಪಡಿಸಿ, ಅದನ್ನು ಪುಡಿ ಮಾಡಿದನು. ಇತರ ಕೆಲವು ಸಣ್ಣ ಮೂಳೆಗಳನ್ನು ಡಸ್ಟ್‌ಬಿನ್‌ಗೆ ಹಾಕಿದನು. ಮನೆಯ ಬಾಗಿಲು, ಅಡಿಗೆ ಕೋಣೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟೆ ಇದೆಲ್ಲವನ್ನೂ ಮಾಡಿದ್ದಾಗಿ ಆರೋಪಿ ಗುರುಮೂರ್ತಿ ಹೇಳಿದ್ದಾನೆ.
ಇಡೀ ದೇಹವನ್ನು ತುಂಡುಗಳಾಗಿ ಮಾಡಲು ಸುಮಾರು 8 ಗಂಟೆಗಳ ಕಾಲ ಕಳೆದಿದ್ದಾನೆ. ಸಾಕ್ಷ್ಯವನ್ನು ನಾಶಪಡಿಸಲು ಡಿಟರ್ಜೆಂಟ್ ಮತ್ತು ಫೀನಾಲ್ ಅನ್ನು ಬಳಸಿದ್ದಾನೆ. ಈ ಘಟನೆಗೆ ಸಂಬಂಧಿಸಿದ ಒಟ್ಟು 16 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂಥಾ ಕೃತ್ಯ ಎಸಗಿದ್ದರೂ ಗುರುಮೂರ್ತಿಗೆ ಮಾತ್ರ ಯಾವುದೇ ಪಶ್ಚಾತ್ತಾಪ ಕಾಡಿಲ್ಲ. ಅವನು ಮಾನವ ರೂಪದಲ್ಲಿದ್ದ ರಾಕ್ಷಸನಂತೆ ವರ್ತಿಸಿದ್ದಾನೆ ಎಂದು ರಾಚಕೊಂಡ ಕಮಿಷನರ್ ಸುದೀರ್ ಬಾಬು ತಿಳಿಸಿದ್ದಾರೆ.
ಪ್ರಕಾಶಂ ಜಿಲ್ಲೆಯ ಗುರುಮೂರ್ತಿ ಮತ್ತು ವೆಂಕಟ ಮಾಧವಿ ಜಿಲ್ಲೆಲಗುಡದಲ್ಲಿ ವಾಸಿಸುತ್ತಿದ್ದರು. ತನ್ನ ಇಬ್ಬರು ಮಕ್ಕಳನ್ನು ತನ್ನ ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದು, ಹೆಂಡತಿಯನ್ನು ಕೊಲ್ಲುವ ಉದ್ದೇಶದಿಂದಲೇ ಜಗಳವಾಡಿದ್ದ. ಮಾಧವಿಯನ್ನು ಕೊಂದು, ಅವಳನ್ನು ಸುಟ್ಟು ಬೂದಿ ಮಾಡಿ ಕೊಳಕ್ಕೆ ಎಸೆದ ನಂತರ ಆತ ತನ್ನ ಇಬ್ಬರು ಮಕ್ಕಳನ್ನು ಮನೆಗೆ ಕರೆತಂದನು. ಬಳಿಕ ಮಕ್ಕಳಿಗೆ ತಾಯಿಯ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದನು. ನಿಮ್ಮ ಅಮ್ಮ ನನ್ನೊಂದಿಗೆ ಜಗಳವಾಡಿದಳು, ನಮ್ಮನ್ನು ಬಿಟ್ಟು ಮನೆಯಿಂದ ಹೊರಟುಹೋದಳು ಎಂದು ನಂಬಿಸಿದನು.
ಗುರುಮೂರ್ತಿಯನ್ನು ವಶಕ್ಕೆ ಪಡೆದ ನಂತರವೂ ತನಿಖೆಯನ್ನು ಹಾದಿ ತಪ್ಪಿಸಲು ಗುರುಮೂರ್ತಿ ಯತ್ನಿಸಿದ್ದ. ಗುರುಮೂರ್ತಿ ಪಕ್ಕಾ ಪ್ಲಾನ್ ಮಾಡಿಯೇ ಮಾಧವಿಯನ್ನು ಕೊಂದಿದ್ದಾನೆ. ಇದು ಆಕಸ್ಮಿಕ ಕೊಲೆಯಲ್ಲ ಎಂದು ಸುದೀರ್ ಬಾಬು ಅವರು ಹೇಳಿದ್ದಾರೆ. (ಏಜೆನ್ಸೀಸ್)
ಕಸದಲ್ಲಿ ಸಿಗುವ ವಸ್ತುಗಳನ್ನು ಮಾರಿ ತಿಂಗಳಿಗೆ 9 ಲಕ್ಷ ರೂ. ಸಂಪಾದಿಸುತ್ತಿದ್ದಾಳೆ 23 ವರ್ಷದ ಯುವತಿ! Garbage