ಹೆಸರಿಗಷ್ಟೇ ಅಕ್ಕ-ತಂಗಿ, ಸಹಾಯಕ್ಕೆ ಮಾತ್ರ ಬರುವುದಿಲ್ಲ : ದರ್ಶನ್​ ಅರ್ಜುನ್​ ಚಿತ್ರದ ನಾಯಕಿ ಬೇಸರ

asdcsdfsdf
Published on

ನಟಿ ಮೀರಾ ಚೋಪ್ರಾ ಕನ್ನಡದ ‘ಅರ್ಜುನ್’ ಸೇರಿ ತಮಿಳು, ತೆಲುಗು, ಹಿಂದಿಯಲ್ಲಿ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ಕಳೆದ 18 ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಈಗಲೂ ಅವಕಾಶಗಳಿಗಾಗಿ ಅಲೆದಾಟ, ಹೋರಾಟ ನಡೆಸಬೇಕಿದೆ ಎಂದು ಬೇಸರ ವ್ಯಕ್ಯಪಡಿಸಿದ್ದಾರೆ. ವಿಶೇಷ ಅಂದರೆ ಮೀರಾ, ಸದ್ಯ ಹಾಲಿವುಡ್‌ನಲ್ಲಿ ಬಿಜಿಯಿರುವ ಪ್ರಿಯಾಂಕಾ ಚೋಪ್ರಾ ಮತ್ತು ಇತ್ತೀಚೆಗಷ್ಟೆ ಸಂಸದ ರಾಘವ್ ಛಡ್ಡಾರನ್ನು ಮದುವೆಯಾದ ನಟಿ ಪರಿಣೀತಿ ಚೋಪ್ರಾ ಸೋದರ ಸಂಬಂಧಿ.

‘ಒಂದೇ ಕುಟುಂಬದ ಮೂರ್ನಾಲ್ಕು ಜನ ಚಿತ್ರರಂಗಕ್ಕೆ ಬಂದರೆ, ಒಬ್ಬರು ಮತ್ತೊಬ್ಬರಿಗೆ ಸಹಾಯ ಮಾಡುವುದು ಸಾಮಾನ್ಯ. ಆದರೆ, ನನ್ನ ವಿಷಯದಲ್ಲಿ ಹಾಗಿರಲಿಲ್ಲ. ನಾನೂ ಅವರ ಬಳಿ ಸಹಾಯ ಕೇಳಲಿಲ್ಲ, ಅವರೂ ಬರಲಿಲ್ಲ. ಪರಿಣೀತಿ ಕುಟುಂಬದ ಜತೆ ನನ್ನ ಕುಟುಂಬದವರು ಹಲವು ವರ್ಷಗಳಿಂದ ಮಾತನಾಡುತ್ತಿಲ್ಲ. ಅದನ್ನು ಮೀರಿ ನಾನು ಆಕೆಯನ್ನು ಮಾತನಾಡಿಸಿದರೆ, ನನ್ನ ಕುಟುಂಬದವರಿಗೆ ಬೇಸರವಾಗುತ್ತೆ ಅಂತ ನಾನೂ ಪರಿಣೀತಿ ವಿಷಯಕ್ಕೆ ಹೋಗಲಿಲ್ಲ. ಆದರೆ, ಪ್ರಿಯಾಂಕಾ ಕುಟುಂಬದ ಜತೆ ಈಗಲೂ ಉತ್ತಮ ಸಂಬಂಧವಿದೆ. ಪ್ರಿಯಾಂಕಾ ಉದಾರ ಮನಸ್ಸಿನವರು. ಆದರೆ, ಸೋದರ ಸಂಬಂಧಿಗಳ ನಡುವಿನ ಬಾಂಧವ್ಯವಿಲ್ಲ. ನಾನೇನೋ ಪ್ರತಿ ಬಾರಿ ಪ್ರೀತಿಯಿಂದ ಮಾತನಾಡಿಸುತ್ತೇನೆ. ಆಕೆಯಿಂದ ಅದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ’ ಎಂದು ಮೀರಾ ಬೇಸರಿಸಿಕೊಂಡಿದ್ದಾರೆ.

ಅಂದಹಾಗೆ, ಅವರು ನಟಿಸಿರುವ ‘ಸಫೇದ್’ ಸಿನಿಮಾ ಇದೇ 29ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net