ಮನಸ್ಸಿನ ಸತ್ಕಾರ್ಯಕ್ಕಿರಲಿ ದೇವರ ಪ್ರೇರಣೆ

pdb-2
Published on

ಪಡುಬಿದ್ರಿ: ಮನಸ್ಸಿನ ಅಧಿದೇವತೆ ರುದ್ರದೇವರಾಗಿದ್ದು, ಎಲ್ಲ ಕಾರ್ಯಗಳಿಗೂ ಮೂಲವಾಗಿರುವ ಮನಸ್ಸಿನಿಂದ ಸತ್ಕಾರ್ಯ ಮಾಡಲು ದೇವರು ಪ್ರೇರಣೆ ನೀಡಲಿ. ರುದ್ರ ದೇವರೊಂದಿಗೆ ಸನ್ನಿಹಿತನಾಗಿರುವ ಗಣಪತಿ ದೇವರೂ ಕೂಡ ಎಲ್ಲ ಜನರಿಗೆ ಅನುಗ್ರಹ ಮಾಡಲಿ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹರಸಿದರು.

30 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿಲಾನ್ಯಾಸ ಬುಧವಾರ ನೆರವೇರಿಸಿ ಆಶೀರ್ವಚನ ನೀಡಿದರು.

ಸಾಮೂಹಿಕವಾಗಿ ಏಕಾದಶ ಕೋಟಿ ಜಪ ಯಜ್ಞದ ಶಿವಮಂತ್ರ ಹಾಗೂ ಗಣಪತಿ ಮಂತ್ರದ ಉಪದೇಶ ನೀಡಿದ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಮನಸ್ಸಿನ ನಿಗ್ರಹಕ್ಕಾಗಿ ರುದ್ರದೇವರ ಅನುಗ್ರಹ ನಮ್ಮ ಮೇಲೆ ನಿರಂತರವಾಗಿರಬೇಕು. ವಿಶಾಲವಾದ ಚಿಂತನೆಯಿರುವ ಸನಾತನ ಧರ್ಮದ ರಕ್ಷಣೆಯೂ ಆಗಬೇಕು ಎಂದರು.

ಕ್ಷೇತ್ರದ ತಂತ್ರಿ ರಾಧಾಕೃಷ್ಣ ಉಪಾಧ್ಯಾಯ ಕಂಬ್ಳಕಟ್ಟ ನೇತೃತ್ವದಲ್ಲಿ ಅರ್ಚಕರಾದ ಪಧ್ಮನಾಭ ಭಟ್, ವೈ.ಗುರುರಾಜ ಭಟ್ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯ ನೆರವೇರಿತು. ದೇವಳ ನಿರ್ಮಾಣದ ಜವಾಬ್ದಾರಿ ಗುತ್ತಿಗೆದಾರ ಸುಜಯ್ ಶೆಟ್ಟಿ ಅವರಿಗೆ ಹಸ್ತಾ ಂತರಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಆನುವಂಶಿಕ ಮೊಕ್ತೇಸರ ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಭವಾನಿಶಂಕರ್ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಪದ್ಮನಾಭ ರಾವ್, ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ್ ಉಪಾಧ್ಯಾಯ, ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ ಉಪಸ್ಥಿತರಿದ್ದರು.

ವೈ.ಸುಕುಮಾರ್ ಸ್ವಾಗತಿಸಿದರು. ಶ್ರೀನಾಥ್ ಹೆಗ್ಡೆ ವಂದಿಸಿದರು, ರಾಮಚಂದ್ರ ಆಚಾರ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net