

ಬೈಂದೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನವರಾದ ಪ್ರಸ್ತುತ ತೆಲಂಗಾಣದಲ್ಲಿ ವಾಸವಾಗಿರುವ ಇಂದ್ರಾಜಿತ ಕೆ. ಆರನೇ ಯತ್ನದಲ್ಲಿ ತೇರ್ಗಡೆಯಾಗಿದ್ದು 739ನೇ ರ‌್ಯಾಂಕ್ ಪಡೆದಿದ್ದಾರೆ.
ಮೂಲತಃ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದವರಾದ ಇಂದ್ರಾಚಿತ, ಗುಲ್ವಾಡಿ ಕೆಳಮನೆ ನಾರಾಯಣ ಶೆಟ್ಟಿ ಮತ್ತು ಪಿ.ಸುಶೀಲಾ ಶೆಟ್ಟಿ ಮೊಮ್ಮಗಳು, ಅಲ್ಸಾಡಿ ರಾಘವೇಂದ್ರ ಶೆಟ್ಟಿ ಹಾಗೂ ಮಮತಾ ಆರ್.ಶೆಟ್ಟಿ ದಂಪತಿ ಪುತ್ರಿ.
1997ರಲ್ಲಿ ಜನಿಸಿರುವ ಇವರು ಪ್ರಸ್ತುತ ಕುಟುಂಬದೊಂದಿಗೆ ತೆಲಂಗಾಣದಲ್ಲಿ ವಾಸವಾಗಿದ್ದಾರೆ. ತೆಲಂಗಾಣದಲ್ಲಿಯೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಬಿಎ (ಎಕಾನಾಮಿಕ್ಸ್, ಪೊಲಿಟಿಕಲ್ ಸೈನ್ಸ್, ಪಬ್ಲಿಕ್ ಅಡ್ಮಿನಿಸ್ಟ್ರೇಶನ್) ಪದವಿ ಪಡೆದು, ಎಂಎ ಪೊಲಿಟಿಕಲ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಳವೆಯಿಂದಲೇ ಐಎಎಸ್ ಆಗುವ ಕನಸು ಹೊತ್ತಿದ್ದ ಇಂದ್ರಾಚಿತ ಕನಸಿಗೆ ನೀರೆರೆದು ಪೋಷಿಸಿದ ಪಾಲಕರು ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಇರುವ ಕೋಚಿಂಗ್ ಕೊಡಿಸಿದ್ದಾರೆ. ದಿಲ್ಲಿಯಲ್ಲಿ ಒಂದು ಕೋಚಿಂಗ್ ಹಾಗೂ ನೀತಿ ಆಯೋಗದಲ್ಲಿ ಇಂಟರ್ನ್‌ಶಿಪ್ ಮಾಡಿದ್ದಾರೆ. ಆರಂಭದ ಮೂರು ಪ್ರಯತ್ನದಲ್ಲಿ ಪ್ರಿಲಿಮ್ಸ್ ತೇರ್ಗಡೆಯಾಗಲು ವಿಫಲರಾದರೂ, ಛಲ ಬಿಡದೇ ನಾಲ್ಕನೇ ಬಾರಿ ಪರೀಕ್ಷೆ ಬರೆದು ಪ್ರಾರಂಭಿಕ ಹಂತ ದಾಟಿದರು. ಆದರೆ ಮೈನ್ಸ್‌ನಲ್ಲಿ ತೇರ್ಗಡೆಗೊಂಡಿರಲಿಲ್ಲ. ಸತತ ಆರು ಬಾರಿ ಯುಪಿಎಸ್ಸಿ ಬರೆದ ಅವರಿಗೆ ಆರನೇ ಪ್ರಯತ್ನದಲ್ಲಿ ಫಲ ಸಿಕ್ಕಿದೆ. ಐದನೇ ಬಾರಿ ಪ್ರಿಲಿಮ್ಸ್, ಮೈನ್ಸ್ ಉತ್ತೀರ್ಣರಾಗಿ, ಸಂದರ್ಶನ ನೀಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ. ಆರನೇ ಯತ್ನದಲ್ಲಿ ಆಯ್ಕೆಯಾಗಿದ್ದಾರೆ.