

ನವದೆಹಲಿ: ಹಿಂದೆಲ್ಲ ದಿನಗಟ್ಟಲೆ ಮದುವೆಗಳು ನಡೆಯುತ್ತಿದ್ದವು. ಈಗಲೂ ಕೆಲವು ಕಡೆ 3-5 ದಿನಗಳ ಮದುವೆ ನಡೆಯುತ್ತದೆ. ಅಷ್ಟಕ್ಕೂ ಕೆಲವು ಕಡೆ ಮದುವೆ ಎಂದರೆ ಅಬ್ಬರ-ಆಡಂಬರದ ದಿನವಿಡೀ ಪ್ರಕ್ರಿಯೆ. ಆದರೆ ಇಲ್ಲೊಂದು ಕಡೆ ಬರೀ ಹದಿನೇಳೇ ನಿಮಿಷಗಳಲ್ಲಿ ಮದುವೆ ಆಗಿಬಿಡುತ್ತದೆ.
ಅರ್ಥಾತ್, ಇವರು 17 ನಿಮಿಷಗಳಲ್ಲೇ ಮದುವೆ ಶಾಸ್ತ್ರ ಮುಗಿಸಿಕೊಂಡು ಬಿಡುತ್ತಾರೆ. ಸಂತ ರಾಮ್ಪಾಲ್ ಜಿ ಮಹಾರಾಜ್ ಅವರ ಅನುಯಾಯಿಗಳು ಇಂಥದ್ದೊಂದ ವಿಶಿಷ್ಟ ರೀತಿಯ ಮದುವೆ ಆಗುತ್ತಿದ್ದಾರೆ. ಇಂಥದ್ದೊಂದು ಸರಳ, ಕ್ಷಿಪ್ರ ಮದುವೆಯ ಹಿಂದೆ ಒಂದು ಉದಾತ್ತ ಉದ್ದೇಶವಿದೆ.
ಹರಿಯಾಣದ ಹಿಸಾರ್ ಎಂಬಲ್ಲಿನ ಬರ್ವಾಲಾದಲ್ಲಿರುವ ಸತ್ಲೋಕ ಆಶ್ರಮದಲ್ಲಿ ಸಂತ ರಾಮ್ಪಾಲ್ ಜಿ ಮಹಾರಾಜ್ ಅವರ ಅನುಯಾಯಿಗಳು ಈ ರೀತಿಯ ಸರಳ ಮದುವೆ ಆಗುತ್ತಿದ್ದಾರೆ. ಭಾರತವನ್ನು ವರದಕ್ಷಿಣೆಮುಕ್ತಗೊಳಿಸುವ ನಿಟ್ಟಿನಲ್ಲಿ ಈ ರೀತಿಯ ಮದುವೆ ಮಾಡಿಕೊಳ್ಳಲಾಗುತ್ತಿದೆ. ಸರಳ ಉಡುಗೆಯಲ್ಲಿ, ಯಾವುದೇ ಆಡಂಬರ ಇರದೆ, ಗುರುವಾಣಿಯೊಂದಿಗೆ ನಡೆಯುವ ಈ ಮದುವೆ 17 ನಿಮಿಷಗಳಲ್ಲಿ ಮುಗಿಯತ್ತಿದ್ದು, ಹದಿನೇಳು ನಿಮಿಷಗಳ ಮದುವೆ ಎಂದೇ ಹೆಸರುವಾಸಿಯಾಗಿದೆ.