ಖ್ಯಾತ ನಟನ ಮನೆಯಲ್ಲಿ ಭಾರೀ ಕಳ್ಳತನ; ಚಿನ್ನ, ಹಣ ದೋಚಿದ ಕೆಲಸದಾಕೆ

Marathi Actor Pushkar Shrotri Who Filed A Police Complaint Against The Maid For Stealing
Published on

ಮುಂಬೈ: ಜನಪ್ರಿಯ ಮರಾಠಿ ನಟ ಪುಷ್ಕರ್ ಶ್ರೋತ್ರಿ ಅವರ ಮನೆಯಲ್ಲಿ ಭಾರೀ ಕಳ್ಳತನ ನಡೆದಿದೆ. ಮನೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಕೆಲಸದಾಕೆಯೇ ಕಳ್ಳತನ ಮಾಡಿದ್ದಾಳೆ ಎಂದು ನಟ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಎಫ್‌ಐಆರ್‌ನ ಪ್ರಕಾರ, ವಿಲೆ ಪಾರ್ಲೆ ಪೂರ್ವದಲ್ಲಿ ನೆಲೆಸಿರುವ ಉದ್ಯಮಿ ಪುಷ್ಕರ್ ಶ್ರೋತ್ರಿ ಅವರು ಮನೆಗೆಲಸಕ್ಕಾಗಿ ಮತ್ತು ಅವರ ತಂದೆಯನ್ನು ನೋಡಿಕೊಳ್ಳಲು ಮೂವರು ಮನೆ ಸಹಾಯಕರನ್ನು ಹೊಂದಿದ್ದರು. ಅವರಲ್ಲಿ ಒಬ್ಬರಾದ ಉಷಾ ಗಂಗುರ್ಡೆ (41) ಅವರು ಸುಮಾರು 5 ರಿಂದ 6 ತಿಂಗಳ ಕಾಲ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕೆಲಸ ಮಾಡುತ್ತಿದ್ದಳು. ಅಕ್ಟೋಬರ್ 22ರಂದು ಪುಷ್ಕರ ಶ್ರೋತ್ರಿ ಅವರ ಮನೆಯಲ್ಲಿ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. 1.20 ಲಕ್ಷ ಹಣ ಹಾಗೂ ರೂ.60 ಸಾವಿರ ವಿದೇಶಿ ಕರೆನ್ಸಿ ಹಾಗೂ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ಪುಷ್ಕರ್ ಶ್ರೋತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅಕ್ಟೋಬರ್ 24 ರಂದು ಪುಷ್ಕರ್ ಶ್ರೋತ್ರಿ ದಂಪತಿ ಅನುಮಾನಗೊಂಡು ಬಿರುನಲ್ಲಿದ್ದ ಚಿನ್ನವನ್ನು ಪರಿಶೀಲಿಸಿದರು. ಅದು ನಕಲಿ ಎಂದು ತಿಳಿದು ಬೆಚ್ಚಿಬಿದ್ದರು. 10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕೆಲಸದಾಕೆ ಉಷಾನೆ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಅಕ್ಟೋಬರ್ 26ರಂದು ಪುಷ್ಕರ್ ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆದರೆ ಈ ಕಳ್ಳತನ ಮಾಡಿದ್ದು ಆತನ ಮನೆಯಲ್ಲಿ ಕೆಲಸ ಮಾಡುವ ಕೆಲಸದಾಕೆ ಉಷಾ ಎಂಬುವರು. ಪೊಲೀಸರಿಗೆ ದೂರು ನೀಡಿದ ನಂತರ ಆಕೆ ಕದ್ದ ಹಣವನ್ನು ಹಿಂದಿರುಗಿಸಿದ್ದಾಳೆ ಎನ್ನಲಾಗಿದೆ. ಹಣವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ.  ಕದ್ದಿರುವ ಹಣವನ್ನು ತನ್ನ ಪತಿ ಭಾನುದಾಸ್ ಗಂಗುರ್ಡೆಗೆ ನೀಡಿದ್ದಾಳೆ. ಆಕೆಯ ಪತಿ ಕೂಡ ಕದ್ದ ಹಣವನ್ನು ಸ್ವೀಕರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಪುಷ್ಕರ್ ಶ್ರೋತ್ರಿ ಅವರು, ಉಷಾ ಮತ್ತು ಆಕೆ ಪತಿ ವಿರುದ್ಧ ಅಕ್ಟೋಬರ್ 26 ರಂದು ವಿಲೇಪಾರ್ಲೆ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 34, 381, 406, ಮತ್ತು 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net