ಅಬ್ಬನಡ್ಕ ರಸ್ತೆಯಲ್ಲಿ ಹೊಂಡಗಳೇ ಅಧಿಕ :ಮೂರು ಗ್ರಾಮಕ್ಕೆ ಸಂಪರ್ಕದ ಕೊಂಡಿ ; ದುರಸ್ತಿಗೆ ಮನವಿ, ಪ್ರತಿಕ್ರಿಯೆ ಶೂನ್ಯ

abbanadka
ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣಗೊಂಡು ಕೆಸರು ನೀರು ತುಂಬಿದ ಕೆದಿಂಜೆ-ಅಬ್ಬನಡ್ಕ ಸಂಪರ್ಕ ರಸ್ತೆ
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕೆದಿಂಜೆಯಿಂದ ಬೋಳ ಹಾಗೂ ಬೆಳ್ಮಣ್ ದೇಗುಲ ರಸ್ತೆ ಸಂಪರ್ಕ ಪಡೆಯುವ ಅಬ್ಬನಡ್ಕ ರಸ್ತೆ ಇತ್ತೀಚೆಗೆ ತೀವ್ರ ಹದಗೆಟ್ಟಿದ್ದು, ಹೊಂಡಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆ ಸೃಷ್ಟಿಯಾಗಿದೆ.

ಅಬ್ಬನಡ್ಕ ರಸ್ತೆ ನಂದಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಹೊಂಡಗುಂಡಿಗಳ ಕೂಪದಿಂದಾಗಿ ವಾಹನ ಅಪಘಾತ ಇಲ್ಲಿ ನಿತ್ಯವೂ ಮಾಮೂಲು. ಮಳೆಗಾಲ ಸಂದರ್ಭ ಹೊಂಡಗಳಲ್ಲಿ ನೀರು ತುಂಬಿರುವುದರಿಂದ ರಸ್ತೆಯನ್ನು ಗುರುತಿಸಲು ವಾಹನ ಚಾಲಕರು ಹರಸಾಹಸಪಡುತ್ತಿದ್ದಾರೆ.

ಪ್ರಮುಖ ಸಂಪರ್ಕ ರಸ್ತೆ

ಕೆದಿಂಜೆ ಮೂಲಕ ಬೆಳ್ಮಣ್ ದೇಗುಲ, ಬೋಳ ಪದವು, ಬೋಳ ಕೋಡಿ ಹಾಗೂ ಮುಂಡ್ಕೂರು, ಸಚ್ಚೇರಿಪೇಟೆ ಸಂಪರ್ಕಿಸಲು ಈ ರಸ್ತೆ ಪ್ರಮುಖವಾಗಿದ್ದು, ನಿತ್ಯವೂ ನೂರಾರು ಜನರು ಸಂಚರಿಸುತ್ತಿರುತ್ತಾರೆ. ಇತಿಹಾಸ ಪ್ರಸಿದ್ದ ಬೆಳ್ಮಣ್ ಶ್ರೀ ದುರ್ಗಾ ದೇವಾಲಯ ಹಾಗೂ ಬೋಳದ ರುದ್ರ ಸೋಮನಾಥೇಶ್ವರ ದೇವಳ, ಸಚ್ಚೇರಿಪೇಟೆಯ ಮಾರಿಗುಡಿ ಹಾಗೂ ಮುಂಡ್ಕೂರು ದೇವಳಕ್ಕೂ ಸಂಪರ್ಕಕ್ಕೂ ಇದೇ ಪ್ರಮುಖ ದಾರಿ. ಸಣ್ಣಪುಟ್ಟ ವಾಹನಗಳಲ್ಲಿ ಸಂಚರಿಸುವವರಿಗೆ ಈ ರಸ್ತೆ ನರಕಯಾತನೆ ನೀಡುತ್ತಿದೆ. ಹೊಂಡಗಳನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿಕೊಂಡರೂ ಈವರೆಗೆ ಪ್ರತಿಕ್ರಿಯೆ ಶೂನ್ಯ.

ಶಾಲಾ ಮಕ್ಕಳಿಗೆ ತೊಂದರೆ

ಈ ಮಾರ್ಗದಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯ ಗ್ರಾಮಗಳ ವಿದ್ಯಾರ್ಥಿಗಳು ಅನಿವಾರ್ಯವಾಗಿ ನಡೆದುಕೊಂಡೇ ಶಾಲಾ, ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಈ ಸಂದರ್ಭ ವಾಹನ ಸಂಚಾರದಿಂದ ಹೊಂಡಗಳಲ್ಲಿರುವ ಕೆಸರು ವಿದ್ಯಾರ್ಥಿಗಳ ಮೇಲೆ ಸಿಡಿಯುತ್ತಿದೆ. ವಿದ್ಯಾರ್ಥಿಗಳು ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮೂರು ಗ್ರಾಮಕ್ಕೆ ಅನುಕೂಲ

ಅಬ್ಬನಡ್ಕ ರಸ್ತೆ ಬೋಳ, ಬೆಳ್ಮಣ್, ನಂದಳಿಕೆ ಹೀಗೆ ಮೂರು ಗ್ರಾಮದ ಪಂಚಾಯತಿಯ ಗಡಿ ಭಾಗದಲ್ಲಿ ಹಾದು ಹೋಗುತ್ತಿದ್ದು, ಮೂರು ಗ್ರಾಮಸ್ಥರಿಗೆ ಇದು ಅನುಕೂಲಕರವಾಗಿದೆ. ಆದರೆ ಹೊಂಡ ಗುಂಡಿಗಳೇ ಅಧಿಕವಾಗಿರುವ ಈ ರಸ್ತೆಯಲ್ಲಿ ಸಂಚರಿಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದು, ಅಪಘಾತ, ಗಾಡಿ ಸ್ಕಿಡ್ ಆಗುವ ಕುರಿತು ಭೀತಿ ಇದೆ. ಶೀಘ್ರವೇ ಹೊಂಡಗಳನ್ನು ಮುಚ್ಚುವ ಅಗತ್ಯವಿದ್ದು, ಕನಿಷ್ಠ ತೇಪೆಯಾದರೂ ಹಾಕಬೇಕು. ದುರಸ್ತಿ ಕಾರ್ಯ ಶೀಘ್ರವೇ ಆರಂಭಿಸದಿದ್ದರೆ ಹೋರಾಟ ಮಾಡುವ ಕುರಿತು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಅಬ್ಬನಡ್ಕ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಈ ಪರಿಸರದಲ್ಲಿ ಎಲ್ಲ ರಸ್ತೆಗಳೂ ತೀರಾ ಹದಗೆಟ್ಟಿದ್ದು, ಹೊಂಡಗಳನ್ನು ಮುಚ್ಚುವಲ್ಲಿ ಅಧಿಕಾರಿಗಳು ಕೂಡಲೇ ಮುತ್ತುವರ್ಜಿ ವಹಿಸಬೇಕಿದೆ.-ಸಂದೀಪ್ ಕುಮಾರ್, ಗ್ರಾಮಸ್ಥರು

ಮಾರ್ಗದಲ್ಲಿ ಹೊಂಡಗಳದ್ದೇ ಸಂಖ್ಯೆ ಹೆಚ್ಚಾಗಿದೆ. ಅಧಿಕಾರಿಗಳು ಪೊಳ್ಳು ಭರವಸೆ ನೀಡುತ್ತಿದ್ದಾರೆಯೇ ಹೊರತು ದುರಸ್ತಿಗೊಳಿಸುವತ್ತ ಆಸಕ್ತಿ ವಹಿಸುತ್ತಿಲ್ಲ. ಇದೀಗ ರಸ್ತೆಯಲ್ಲಿ ಕೆಸರು ತುಂಬಿದ್ದು, ದ್ವಿಚಕ್ರ ವಾಹನಗಳಿಗೆ ರಸ್ತೆ ಗುರುತಿಸಲು ಕಷ್ಟವಾಗುತ್ತಿದೆ. ಪಾದಚಾರಿಗಳೂ ಸಮಸ್ಯೆ ಎದುರಿಸುತ್ತಿದ್ದಾರೆ.-ಸತೀಶ್ ಶೆಟ್ಟಿ, ಗ್ರಾಮಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net