ಕೆಸರು ಗುಂಡಿಯಾದ ಕೆರಾಡಿ ರಸ್ತೆ, ಸಂಚಾರಕ್ಕೆ ಸಂಕಷ್ಟ, ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ

keradi
ಕೆಸರು ಗುಂಡಿಯಂತಾದ ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಗ್ರಾಮದ ಮುಖ್ಯರಸ್ತೆ
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಗ್ರಾಮದ ಮುಖ್ಯರಸ್ತೆ ಅವ್ಯವಸ್ಥೆಯ ಆಗರವಾಗಿದ್ದು, ರಸ್ತೆಯಲ್ಲಿ ಸಂಚರಿಸುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆರಾಡಿ ಗ್ರಾಪಂ, ಸರ್ಕಾರಿ ಪ್ರಾಥಮಿಕ ಶಾಲೆ, ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಪಡಿತರ ಅಂಗಡಿ, ಖಾಸಗಿ ಪಿಯು ಕಾಲೇಜು, ಜಿಲ್ಲೆಯಲ್ಲೇ ಪ್ರಮುಖ ಪ್ರವಾಸಿತಾಣ ಎನಿಸಿಕೊಂಡ ಮೂಡುಗಲ್ಲು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಇದು ಬೇಸಿಗೆ ಕಾಲದಲ್ಲಿ ಹೊಂಡ ಗುಂಡಿ ಜತೆ ಧೂಳುಮಯವಾಗಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಾಗುತ್ತದೆ. ಮಳೆಗಾಲದ ಸಂದರ್ಭ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು, ಅನಾರೋಗ್ಯ ಪೀಡಿತರು ಕಾಲು ದಾರಿಗೆ ಜಾಗವೇ ಇಲ್ಲದಂತಿರುವ ಈ ಕೆಸರು ರಸ್ತೆಯಲ್ಲೇ ಹಾದು ಹೋಗಬೇಕಿರುವುದು ದುರಾದೃಷ್ಟ.

ಸಂಸದರ ಆದರ್ಶ ಗ್ರಾಮ!

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸಂಸದರ ಗ್ರಾಮ ದತ್ತು ಸ್ವೀಕಾರ ಯೋಜನೆಯಡಿ ಕೆರಾಡಿ ಗ್ರಾಮ ದತ್ತು ಸ್ವೀಕಾರ ಮಾಡಲಾಗಿದ್ದರೂ ಗ್ರಾಮದಲ್ಲಿ ಇನ್ನೂ ಅನೇಕ ಮೂಲಸೌಕರ್ಯ ಮರೀಚಿಕೆಯಂತಾಗಿದೆ. ಕೆರಾಡಿ ಗ್ರಾಮ ಸಂಪರ್ಕಿಸುವ ಪ್ರಮುಖ ರಸ್ತೆ ಪರಿಸ್ಥಿತಿ ಹೀಗಾದರೆ ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಗ್ರಾಮದ ರಸ್ತೆ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಸ್ಥಳೀಯಾಡಳಿತ, ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿಯವರ ಗಮನ ಸೆಳೆದಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಗೆ ಅಭಿವೃದ್ಧಿ ಭಾಗ್ಯ ಕೂಡಿ ಬಂದಿಲ್ಲ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿ ಊರಿನ ಜನರಿಗಾಗುತ್ತಿರುವ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net