

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಬಹಳಷ್ಟು ಮಕ್ಕಳು ಮೊಬೈಲ್, ಇಂಟರ್ನೆಟ್ ಕಾರಣಗಳಿಂದ ಮನೆಯೊಳಗೇ ಆಡುತ್ತಿದ್ದು, ಬಾಹ್ಯ ಆಟ ಕಡಿಮೆಯಾಗಿದೆ. ದೈಹಿಕ ಕಸರತ್ತಿನ ಆಟ ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಸಹಕಾರಿ. ಆಟ ಸ್ನೇಹಕ್ಕೆ ಮೂಲ ಎಂದು ಕುಂದಾಪುರ ಉಪವಿಭಾಗಧಿಕಾರಿ ರಶ್ಮಿ ಆರ್. ಹೇಳಿದರು.
ದಿ.ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಆಶ್ರಯದಲ್ಲಿ ವಿಜಯನಗರ ಮತ್ತು ಉಡುಪಿ ಜಿಲ್ಲೆಯ ಭೀಮ ಸಂಘ ಮತ್ತು ಮಕ್ಕಳ ಸಂಘದ ಜಂಟಿ ಸಹಯೋಗದೊಂದಿಗೆ ಮೊದಲ ಅಂತಾರಾಷ್ಟ್ರೀಯ ಆಟದ ದಿನಾಚರಣೆ ಪ್ರಯುಕ್ತ ಕುಂದಾಪುರದ ವ್ಯಾಸರಾಜ ಮಠದಲ್ಲಿ ಜರಗಿದ ‘ಆಟ ನಮ್ಮ ಹಕ್ಕು, ಜತೆಯಾಗಿ ಆಡೋಣ, ಜತೆಯಾಗಿ ಬಾಳೋಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರೀಡೆಯಲ್ಲಿ ಬಹಳ ಅವಕಾಶಗಳಿವೆ. ಮಕ್ಕಳಿಗೆ ಕ್ರೀಡೆಗಳಲ್ಲಿ ಆಸಕ್ತಿಯಿದ್ದರೆ ಪಾಲಕರು ಅವರನ್ನು ಪ್ರೋತ್ಸಾಹಿಸಿ ಆ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶ ನೀಡಬೇಕು ಎಂದರು.
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ನಮ್ಮ ಜೀವನದಲ್ಲಿ ಆಟ ಮುಖ್ಯ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಶಾರೀರಿಕ, ಮಾನಸಿಕ ವಿಕಾಸ ಆಗುತ್ತದೆ. ಮಕ್ಕಳ ಬೇಡಿಕೆಯನುಸಾರ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಿಡಬ್ಲುೃಸಿ ಸಂಯೋಜಕಿ ಕೃಪಾ ಎಂ.ಎಂ. ಪ್ರಸ್ತಾವನೆಗೈದರು. ಅಂತಾರಾಷ್ಟ್ರೀಯ ಮಟ್ಟದ ಮಕ್ಕಳ ಮತ್ತು ಯುವ ಸಲಹಾ ಸಮಿತಿ ಪ್ರತಿನಿಧಿಸಿದ್ದ ಮಹೇಶ್ವರಿ, ಶ್ರೀರಕ್ಷಾ, ನಿಶ್ಮಿತಾ, ಅಂಜಲಿ ಮತ್ತು ತನುಶ್ ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಗುತ್ತಿಗೆದಾರ ಕೆ.ಆರ್.ನಾಯ್ಕ ಶುಭಾಶಂಸನೆಗೈದರು. ಪತ್ರಕರ್ತ ಜಾನ್ ಡಿಸೋಜ ಮಕ್ಕಳೊಂದಿಗೆ ಸಂವಾದ ನಡೆಸಿದರು. ಸಿಡಬ್ಲುೃಸಿ ಸಂಸ್ಥೆಯ ಭೀಮ ಪತ್ರಿಕೆ ಮತ್ತು ದಾಮು ದುಂದುಬಿ ಹಾಗೂ ಮಂಜನ ಸುಂಕದಕಟ್ಟೆ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದೀಪಾ, ಕುಂದಾಪುರ ತಾಪಂ ಅಧಿಕಾರಿ ರಾಮಚಂದ್ರ ಮಯ್ಯ, ಸಿಡಬ್ಲುೃಸಿ ಉಪ ಕಾರ್ಯಕಾರಿ ನಿರ್ದೇಶಕ ಶಿವಾನಂದ ಶೆಟ್ಟಿ ಉಪಸ್ಥಿತರಿದ್ದರು.
ಸಿಡಬ್ಲುೃಸಿ ಸಂಸ್ಥೆಯ ಶಿವಾನಂದ ಗಾಣಿಗ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕುಂದಾಪುರದ ಶಾಸ್ತ್ರಿ ವೃತ್ತದ ಬಳಿಯಿಂದ ವ್ಯಾಸರಾಜ ಮಠದ ತನಕ ಮಕ್ಕಳ ಸಂಘದ ಹಾಗೂ ಭೀಮ ಸಂಘದ ಮಕ್ಕಳು ಜಾಥಾ ನಡೆಸಿದರು.
ಕ್ರೀಡೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿನ ನಿಗದಿಪಡಿಸುವ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಮಕ್ಕಳ ಹಾಗೂ ಯುವ ಸಲಹಾ ಸಮಿತಿ ರಚಿಸಲಾಗಿದ್ದು, ಕುಂದಾಪುರದ ಮಕ್ಕಳ ಸಂಘ ಮತ್ತು ಹಾಲಾಡಿ ಮಕ್ಕಳ ಸಂಘದ ಸದಸ್ಯರಾದ ಶ್ರೀರಕ್ಷಾ ಮತ್ತು ಅಂಜಲಿ, ವಿಜಯಪುರ ಜಿಲ್ಲೆಯ ಭೀಮ ಸಂಘದ ಮಹೇಶ್ವರಿ ಸಮಿತಿಯನ್ನು ಪ್ರತಿನಿಧಿಸಿ ಆಟದ ದಿನಕ್ಕೆ ಶಿಫಾರಸು ಮಂಡಿಸಿದ್ದರು. ವಿಶ್ವಸಂಸ್ಥೆ ಜೂನ್ 11 ಅನ್ನು ಅಂತಾರಾಷ್ಟ್ರೀಯ ಆಟದ ದಿನ ಎಂದು ಘೋಷಿಸಿದೆ.-ಕೃಪಾ ಎಂ.ಎಂ., ಸಿಡಬ್ಲುೃಸಿ ಸಂಯೋಜಕಿ