ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ಬ್ರಹ್ಮಾವರ ತಾಲೂಕು 4ನೇ ಸಾಹಿತ್ಯ ಸಮ್ಮೇಳನ

2 Min Read
bmr sahithya
ಬ್ರಹ್ಮಾವರ ತಾಲೂಕು 4ನೇ ಸಾಹಿತ್ಯ ಸಮ್ಮೇಳನವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು

ವಿಜಯವಾಣಿ ಸುದ್ದಿಜಾಲ ಕೋಟ

ಸರ್ಕಾರಿ ಶಾಲೆಗಳಲ್ಲೂ ಶಿಕ್ಷಕರ ಕೊರತೆ, ಮೂಲಸೌಕರ್ಯದ ಕೊರತೆಯಿಂದ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಕನ್ನಡ ಶಾಲೆಗಳು ಮುಚ್ಚುತ್ತಿರುವುದೇ ಕನ್ನಡದ ಅವನತಿಯ ಸಂಕೇತ ಎಂದು ಬ್ರಹ್ಮಾವರ ತಾಲೂಕು ಸಮ್ಮೇಳನಾಧ್ಯಕ್ಷ, ಶಿಕ್ಷಕ ಪಾರಂಪಳ್ಳಿ ನರಸಿಂಹ ಐತಾಳ ಹೇಳಿದರು.

ಕಸಾಪ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕ ಆಶ್ರಯದಲ್ಲಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ ಸಹಕಾರದಲ್ಲಿ ಮಂಗಳವಾರ ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ಬ್ರಹ್ಮಾವರ ತಾಲೂಕು 4ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಶಾಲೆಗಳಿಗೆ ಸರ್ಕಾರ ಮೂಲಸೌಕರ್ಯ ನೀಡಬೇಕು. ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ನೀಡುವ ಕೃಪಾಂಕ ಹೆಚ್ಚಬೇಕು. ಗ್ರಾಮೀಣ ಕೃಪಾಂಕ ವ್ಯವಸ್ಥೆ ಕೇವಲ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿತವರಿಗೆ ಮಾತ್ರ ದೊರಕಬೇಕು. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಕಾರ್ಯ ಸಂಘಟನೆಗಳ ಜತೆಗೆ ಸರ್ಕಾರ ಮಾಡಬೇಕು. ಆಗ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಲಿಗ್ರಾಮ ಪಪಂ ಮುಖ್ಯಾಧಿಕಾರಿ ಶಿವ ನಾಯ್ಕ ಧ್ವಜಾರೋಹಣ ಹಾಗೂ ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಪರಿಷತ್‌ಧ್ವಜಾರೋಹಣ ನೆರವೇರಿಸಿದರು. ವೈದ್ಯ ಡಾ.ವಿಷ್ಣುಮೂರ್ತಿ ಐತಾಳ ಸಾಧಕ ಶಿಕ್ಷಕರನ್ನು ಸನ್ಮಾನಿಸಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹಿಂದಿನ ಸಮ್ಮೇಳನಾಧ್ಯಕ್ಷ ಡಾ.ಜಗದೀಶ್ ಶೆಟ್ಟಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಕನ್ನಡ ಸಂಸ್ಕೃತಿ ಇಲಾಖೆ ಜಿಲ್ಲಾ ನಿರ್ದೇಶಕಿ ಪೂರ್ಣಿಮಾ, ಕಸಾಪ ಪದಾಧಿಕಾರಿಗಳಾದ ನರೇಂದ್ರ ಕುಮಾರ್ ಕೋಟ, ಮನೋಹರ ಪಿ., ಸತೀಶ್ ವಡ್ಡರ್ಸೆ, ಅಚ್ಚುತ್ ಪೂಜಾರಿ, ರಂಗಪ್ಪಯ್ಯ ಹೊಳ್ಳ, ಉದ್ಯಮಿ ರಾಮಚಂದ್ರ ಉಪಾಧ್ಯ ಹಾಗೂ ಎಲ್ಲ ತಾಲೂಕು ಘಟಕದ ಅಧ್ಯಕ್ಷರು, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಸದಸ್ಯರು ಇದ್ದರು. ನಿವೃತ್ತ ಶಿಕ್ಷಕ ಶ್ರೀಪತಿ ಹೇರ್ಳೆ ಸ್ವಾಗತಿಸಿ, ಜ್ಯೋತಿ ಕೃಷ್ಣ ಪೂಜಾರಿ ನಿರೂಪಿಸಿ, ಗೆಳೆಯರ ಬಳಗದ ತಾರಾನಾಥ ಹೊಳ್ಳ ವಂದಿಸಿದರು.

See also  ಗ್ಯಾಸ್ ಸ್ಫೋಟಕ್ಕೆ ಆಹಾರ ತಯಾರಿ ಘಟಕ ಮಾಲೀಕ ಬಲಿ

ಉಪನ್ಯಾಸ, ವಿಚಾರ ಮಂಡನೆ

ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು. ‘ಬ್ರಹ್ಮಾವರ ತಾಲೂಕಿನ ವಿಶೇಷಗಳು ಒಂದು ಬೀಸು ನೋಟ’ ವಿಶೇಷ ಉಪನ್ಯಾಸ ನಡೆಯಿತು. ತಾಲೂಕಿನಲ್ಲಿ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಗೌರವಿಸಲಾಯಿತು. ಬಹುವಿಧಗೋಷ್ಠಿಯ ಮೂಲಕ ಜನಪದ ಸಾಹಿತ್ಯ, ಕುಂದಗನ್ನಡ ಸಾಹಿತ್ಯ, ಕಥವಾಚನ, ಅನುಭವ ಕಥನ ಮೊದಲಾದ ಹಲವು ವಿಚಾರಗಳ ಕುರಿತು ಮಂಡನೆ ನಡೆಯಿತು. ಭಾಗವತ ನಾರಾಯಣ ಶಬರಾಯ ಅವರಿಂದ ತೆಂಕು-ಬಡಗು ತಿಟ್ಟುಗಳ ಆಯ್ದ ಯಕ್ಷಗಾಯನದ ಸಮನ್ವಯ ನಡೆಯಿತು.

Share This Article