

| ಗಣೇಶ್ಕುಮಾರ್ ಬಿ.ಎನ್.
ವ್ಯವಸಾಯಿಗಳ ಒಂದು ಪುಟ್ಟಗ್ರಾಮ. ಗ್ರಾಮಸ್ಥರು ವ್ಯವಸಾಯಕ್ಕೆ ಮಳೆಯನ್ನೇ ಅವಲಂಬಿಸಿದ್ದರಿಂದ ಅದು ಯೋಗ್ಯವಲ್ಲವೆಂದು, ಮುಂಜಾಗ್ರತಾ ಕ್ರಮವಾಗಿ ದೊಡ್ಡ ವಿಸ್ತೀರ್ಣವುಳ್ಳ ಕೆರೆಯನ್ನು ಕಟ್ಟಿಸುವುದಾಗಿ ಹಿರಿಯರು ನಿಶ್ಚಯಿಸಿದರು. ಬೃಹತ್ತಾದ ನಿರ್ವಣದ ಖರ್ಚುವೆಚ್ಚಗಳಿಗೆ ಊರಿನ ಎಲ್ಲ ಕುಟುಂಬಗಳು ತಮ್ಮ ಕೊಡುಗೆಯನ್ನು ನೀಡಬೇಕೆಂದು ಸುತ್ತೋಲೆಯನ್ನು ಹೊರಡಿಸಿದರು. ಗ್ರಾಮದ ಕುಟುಂಬಗಳೆಲ್ಲವೂ ಅನುಕೂಲಸ್ಥರಾಗಿದ್ದುದರಿಂದ ಹಣವನ್ನು ಸಂದಾಯ ಮಾಡುವುದು ಕಷ್ಟಕರವಾಗಿರಲಿಲ್ಲ.
ಆದರೆ ಗ್ರಾಮದ ಧನಿಕನೊಬ್ಬ ಹೀಗೆ ಆಲೋಚಿಸಿದ-‘ನನ್ನ ಕೃಷಿಭೂಮಿಯ ಬಾವಿಯಲ್ಲಿ ಸಮೃದ್ಧವಾಗಿ ನೀರು ತುಂಬಿದೆ, ನಾನೇಕೆ ಊರಕೆರೆಗೆ ಹಣವನ್ನು ವ್ಯಯಿಸಬೇಕು?’ ಎಂದು. ಕುಬುದ್ಧಿಯಿಂದ ಕೂಡಿದ ಆತನು ಬಹಳ ನಷ್ಟದಲ್ಲಿ ಇರುವೆನೆಂದು ಸುಳ್ಳು ಹೇಳಿ ಕಳುಹಿಸಿದನು. ಧನಿಕನ ಈ ನಡೆಯನ್ನು ನೋಡಿ, ಗ್ರಾಮದ ಬಹುತೇಕ ಜನರು ನಾವೂ ಈ ರೀತಿಯಲ್ಲಿ ನಡೆದರೆ ಹಣವು ಉಳಿಯುವುದು ಎಂದು ಆಲೋಚಿಸಿ, ಧನಿಕನ ಹಾಗೆ ಸುಳ್ಳು ಕಾರಣಗಳನ್ನು ನೀಡಿ ಹಿರಿಯರನ್ನು ಹಿಂತಿರುಗಿಸಿದರು. ನಿರೀಕ್ಷಿಸಿದ ಹಣ ಸಂಗ್ರಹವಾಗದ ಕಾರಣ ಕೆರೆ ನಿರ್ವಣವಾಗಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲರ ಬಾವಿಗಳು ಬತ್ತಿದವು; ನೀರಿನ ಹಾಹಾಕಾರ ಉಂಟಾಗಿ ರೋಗಗಳು ಹರಡಿದವು; ಅನಾಹುತಗಳು ಸಂಭವಿಸಿದವು. ಇದನ್ನೂ ಓದಿ: ಮನೋಲ್ಲಾಸ: ಮೊದಲು ನಾವು ಬದಲಾಗೋಣ
ಕೆರೆಗೆ ಸಲ್ಲಿಸುವ ಕರವು, ನಷ್ಟವಲ್ಲ, ತಮ್ಮ ಒಳಿತಿಗಾಗಿಯೇ ಮಾಡುವ ಕೆಲಸ ಎಂಬುದನ್ನು ಮರೆಯಬಾರದು. ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬ ದಾಸರ ವಾಣಿಯನ್ನು ಜ್ಞಾಪಿಸುವ ಈ ಕಥೆ ಗೂಢವಾದ ಅರ್ಥವನ್ನು ಕೊಡುತ್ತಿದೆ. ನಮ್ಮ ದೇಹವೇ ಈ ಗ್ರಾಮ. ಇದು ನಮ್ಮ ಇಂದ್ರಿಯಗಳಿಂದ ಕೂಡಿದ ಗ್ರಾಮ. ಯಜ್ಞ, ದಾನ, ಪೂಜೆಗಳಿಗೆ ಏಕೆ ಧನವ್ಯಯವೆಂದು, ಸ್ವಂತ ಅನುಭೋಗಕ್ಕಾಗಿ ಕೂಡಿಡುವ ಬುದ್ಧಿ ಸಹಜ. ‘ಯಜ್ಞದಲ್ಲಿ ಕೊಟ್ಟ ಹವಿಸ್ಸು ಹೊರನೋಟಕ್ಕೆ ವ್ಯಯದಂತೆ ಕಂಡರೂ ನಮ್ಮನ್ನು ಧರಿಸುವ ದೇವತಾ ರೂಪವಾದ ಶಕ್ತಿ ಎಂಬ ಕೆರೆಗೆ ಚೆಲ್ಲಿದ ಕಾಣಿಕೆಯದು. ಇದು ಸಸಿಯ ಬೇರಿಗೆ ಎರೆದ ನೀರಿನಂತೆ’ ಎಂಬುದು ಶ್ರೀರಂಗಮಹಾಗುರುಗಳ ಪ್ರಯೋಗಬದ್ಧವಾದ ದರ್ಶನ. ನಮ್ಮ ಅಸ್ತಿತ್ವದ ಬೇರಾಗಿರುವ ಚೈತನ್ಯಶಕ್ತಿಗಳಿಗೆ ಎರೆದ ನೀರಿದು ಎಂಬುದು ಅವರ ಸಿದ್ಧಾಂತ. ಆದರೆ ಬೇರಿಗೆ ಸರಿಯಾಗಿ ನೀರೆರೆವ ಕಲೆ ತಿಳಿದಿರಬೇಕು. ಯಜ್ಞದಲ್ಲಿ ಹವಿಸ್ಸನ್ನು ಸಮರ್ಪಿಸುವಂತೆ ಸದ್ ಗೃಹಸ್ಥನು ಮನೆಯ ಅಡುಗೆಯನ್ನು ಭಗವಂತನಿಗೆ ನಿವೇದಿಸಿ ಪ್ರಸಾದವಾಗಿ ಸ್ವೀಕರಿಸುತ್ತಾನೆ. ಇದು ನಮ್ಮ ಒಳಿತಿಗಾಗಿ; ದೇವರ ಒಳಿತಿಗಾಗಲ್ಲ. ಅಂತೆಯೇ ಧರ್ವಿುಷ್ಠನಾದ ರಾಜನಿಗೆ ಸಲ್ಲಿಸಿದ ಕರವು ವರದಂತೆ ಕೆಲಸ ಮಾಡುತ್ತದೆ. ನಮ್ಮ ದೇಶದ ಋಷಿ-ಮುನಿಗಳು ಇಂತಹ ಕಲೆಯನ್ನು ಬಲ್ಲವರಾಗಿದ್ದರು. ಇದನ್ನೂ ಓದಿ: ಮನೋಲ್ಲಾಸ: ಹೀಗಿರಬೇಕು ವ್ಯವಹಾರ ಸೂತ್ರ
ಅಂತಹ ಋಷಿಗಳು ಹೇಳುವ ಸೂತ್ರರೂಪದ ಮಾತೆಂದರೆ, ಸಮರ್ಪಿಸುವುದು ಅಲ್ಪವಾದರೂ, ಸಮರ್ಪಣಾ ಭಾವದಿಂದ, ‘ನ ಮಮ’ (ನನಗಲ್ಲ) ಎಂದು ಸಮರ್ಪಿಸಿದರೆ ಅದು ಬೃಹತ್ತಾದ ವರವಾಗಿ ಮರಳಿ ಬರುವುದು. ಸಮರ್ಪಣೆ ಪಾರಮಾರ್ಥಿಕವಾಗಿ ಶಾಶ್ವತವಾದ ನೆಮ್ಮದಿ, ಸೌಖ್ಯಗಳನ್ನು ತರುತ್ತದೆ.
(ಲೇಖಕರು ತೆರಿಗೆ ತಜ್ಞರು, ಹಿರಿಯ ಲೆಕ್ಕ ಪರಿಶೋಧಕರು)