ಮನೋಲ್ಲಾಸ: ಹೀಗಿರಬೇಕು ವ್ಯವಹಾರ ಸೂತ್ರ

edit 3
Published on

| ಚಿದಂಬರ ಮುನವಳ್ಳಿ

ರೈಲ್ವೆ ಇಂಜಿನ್​ಗಳನ್ನು ತಯಾರಿಸುವಲ್ಲಿ ವಿಶ್ವದಲ್ಲಿಯೇ ಪ್ರಸಿದ್ಧವಾದ ಜರ್ಮನಿಯ ಕ್ರಾಸ್ ಮೆಫಿ ಕಂಪನಿಯ ತಾಂತ್ರಿಕ ಸಹಯೋಗದಿಂದ ಭಾರತದಲ್ಲಿಯೂ ಅಂಥ ಇಂಜಿನ್​ಗಳನ್ನು ತಯಾರಿಸಬೇಕೆಂಬ ಮಹದಾಸೆ ಹೊತ್ತು 1946ರಲ್ಲಿ ಜೆ ಆರ್ ಡಿ ಟಾಟಾ ಮಾತುಕತೆಗೆಂದು ಆ ಕಂಪನಿಯ ಪ್ರಧಾನ ಕಚೇರಿ ಇರುವ ಮ್ಯುನಿಕ್ ನಗರಕ್ಕೆ ತೆರಳಿದರು. ಆ ಕಂಪನಿಯ ನಿರ್ದೇಶಕ ಮಂಡಳಿ ಸದಸ್ಯರು ಟಾಟಾರನ್ನು ಆದರದಿಂದ ಬರಮಾಡಿಕೊಂಡರು. ಆದರೆ ಅಲ್ಲಿಯ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಕಂಡ ಟಾಟಾರಿಗೆ ಏಕಕಾಲಕ್ಕೆ ದುಃಖ ಹಾಗೂ ನಿರಾಸೆ ಉಂಟಾದವು.

ಎರಡನೇ ಮಹಾಯುದ್ಧದಲ್ಲಿ ವಾಯುಪಡೆ ದಾಳಿಯಿಂದಾಗಿ ಕಂಪನಿಯ ಕಾರ್ಖಾನೆ ಸಂಪೂರ್ಣವಾಗಿ ನಾಶ ಹೊಂದಿತ್ತು. ಅಲ್ಲಿಯ ನಿರ್ದೇಶಕರು ಟಾಟಾರವರ ಮುಂದೆ ಅಸಹಾಯಕತೆ ತೋರುತ್ತ, ‘ಯುದ್ಧದ ಭೀಕರತೆಯಿಂದಾಗಿ ನಾವಂತೂ ಈಗ ನಿಮಗೆ ತಾಂತ್ರಿಕ ನೈಪುಣ್ಯತೆ ಒದಗಿಸುವ ಸ್ಥಿತಿಯಲ್ಲಿಲ್ಲ. ನಮ್ಮ ಇಂಜಿನಿಯರ್​ಗಳಿಗೆ ವೇತನ ನೀಡಲೂ ಅಸಮರ್ಥರಾಗಿದ್ದೇವೆ. ಹೇಗೂ ಇಷ್ಟು ದೂರ ಬಂದಿದ್ದೀರಿ. ನೀವು ನಮಗೊಂದು ಸಹಾಯ ಮಾಡುವುದಾದರೆ ಈ ನುರಿತ ಇಂಜಿನಿಯರ್​ಗಳನ್ನು ನಿಮ್ಮೊಟ್ಟಿಗೆ ಕರೆದುಕೊಂಡು ಹೋಗಿ, ಉದ್ಯೋಗ ಕೊಡಿ. ಅವರಿಗೆ ಊಟ, ವಸತಿ ಕಲ್ಪಿಸಿದರೆ ಸಾಕು. ನಿಮ್ಮ ಜನರಿಗೂ ತಂತ್ರಜ್ಞಾನ ಕಲಿಸಿ ಕೊಡುತ್ತಾರೆ’ ಎಂದರು.

ಟಾಟಾ ಆ ಇಂಜಿನಿಯರ್​ಗಳನ್ನು ಕುಟುಂಬಸಮೇತ ಭಾರತಕ್ಕೆ ಕರೆತಂದು ಅವರಿಗೆಲ್ಲ ಒಳ್ಳೆಯ ಸಂಬಳ ಕೊಟ್ಟು, ವಸತಿ ವ್ಯವಸ್ಥೆಯನ್ನೂ ಕಲ್ಪಿಸಿದರು. ಅವರ ತಂತ್ರಜ್ಞಾನದ ಕೌಶಲವನ್ನು ಬಳಸಿಕೊಂಡು ಇಂಜಿನ್​ಗಳನ್ನು ತಯಾರಿಸಲಾರಂಭಿಸಿ ಮುಂದೆ ಬೃಹತ್ ಪ್ರಮಾಣದಲ್ಲಿ ಟ್ರಕ್ ತಯಾರಿಕೆಯಲ್ಲಿಯೂ ಯಶಸ್ಸು ಗಳಿಸಿದರು. ಇದಾದ 4 ವರ್ಷಗಳ ನಂತರ ಟಾಟಾ ಆ ಕಂಪನಿಗೆ ಪತ್ರ ಬರೆದು- ‘ನಿಮ್ಮ ಇಂಜಿನಿಯರ್​ಗಳ ಸಹಾಯಕ್ಕಾಗಿ ನಾವು ಕೃತಜ್ಞರು. ಆಗಿನ ಪರಿಸ್ಥಿತಿಯಲ್ಲಿ ರಾಜತಾಂತ್ರಿಕ ಕಾರಣಗಳಿಂದ ತಂತ್ರಜ್ಞಾನ ವರ್ಗಾವಣೆಯ ಒಪ್ಪಂದ ಮಾಡಿಕೊಂಡು ನಿಮಗೆ ಹಣ ನೀಡಲು ಸಾಧ್ಯವಾಗಲಿಲ್ಲ. ಆಗ ಕೊಡಬೇಕಿದ್ದ ಹಣವನ್ನು ಈಗ ಕಳುಹಿಸುತ್ತಿದ್ದೇವೆ, ಸ್ವೀಕರಿಸಿ’ ಎಂದಿದ್ದರು. ಅದನ್ನೋದಿ ಕಂಪನಿ ಅಧಿಕಾರಿಗಳ ಕಣ್ಣಲ್ಲಿ ನೀರು ಬಂತು. ಯಾವ ಲಿಖಿತ ಒಪ್ಪಂದ ಇಲ್ಲದಿದ್ದರೂ ಪೂರ್ಣ ಹಣವನ್ನು ಪಾವತಿಸಿದ ಈ ಮನುಷ್ಯ ಎಷ್ಟು ಎತ್ತರದ ವ್ಯಕ್ತಿಯಾಗಿರಬಹುದು ಎಂದುಕೊಂಡು, ಪತ್ರಕ್ಕೆ ಮರು ಉತ್ತರ ಬರೆದರು-‘ನಾವು ನಿಮಗೆ ಏನನ್ನೂ ನೀಡಿಲ್ಲವಾದ್ದರಿಂದ ಹಣ ಸ್ವೀಕರಿಸಲಾಗದು. ನೀವು ನಮ್ಮ ಇಂಜಿನಿಯರ್​ಗಳಿಗೆ ಮಾಡಿದ ಉಪಕಾರವೇ ದೊಡ್ಡದಿದೆ. ಈಗ ನಾವೂ ಚೇತರಿಸಿಕೊಳ್ಳುತ್ತಿದ್ದೇವೆ. ನಿಮ್ಮ ಸ್ನೇಹ ದೊರೆತದ್ದು ನಮ್ಮ ಭಾಗ್ಯ’. ಹೀಗೆ ಇಬ್ಬರೂ ವೃತ್ತಿಧರ್ಮ ಪಾಲಿಸಿ ಪ್ರಬುದ್ಧತೆ ಮೆರೆದರು.

ಭಾಗವತದಲ್ಲಿ, ‘ನಾವು ಮಾಡುತ್ತಿರುವ ಕೆಲಸಗಳಲ್ಲಿ ದೇವರು ಮೆಚ್ಚುವಂಥ ಅಂಶಗಳು ಇಲ್ಲದಿದ್ದರೆ ಅಥವಾ ಅದರಲ್ಲಿ ಪರಹಿತದ ಅನುರಾಗವು ಉದಯಿಸದಿದ್ದರೆ ಅದು ಧರ್ಮವಾಗದೇ ಕೇವಲ ಶ್ರಮವಾಗುತ್ತದೆ’ ಎಂದಿದೆ. ನಮ್ಮ ವ್ಯವಹಾರವು ಶ್ರೇಷ್ಠ ಆಚರಣೆಯೋ ಅಥವಾ ಗುಡ್ಡಕ್ಕೆ ಕಲ್ಲು ಹೊತ್ತಂತೆ ಸುಮ್ಮನೇ ಶ್ರಮ ಪಡುವಂಥದೋ ಅವಲೋಕನ ಮಾಡುವಂತಿದೆ. ಅಲ್ಲವೇ?

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net