ಮನೋಲ್ಲಾಸ: ಮೊದಲು ನಾವು ಬದಲಾಗೋಣ

Manollasa
Published on
ರೇಖಾ ಗಜಾನನ ಭಟ್ಟ

ಹಳ್ಳಿಯಲ್ಲಿ ವ್ಯವಸಾಯವನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಒಂದು ಕುಟುಂಬದ ಯಜಮಾನ ತೀರಿಕೊಂಡ. ಅವನ ಇಬ್ಬರು ಗಂಡುಮಕ್ಕಳು ಪೇಟೆಯಲ್ಲಿ ಉದ್ಯೋಗದಲ್ಲಿದ್ದರು. ಇನ್ನು ಮುಂದೆ ತನ್ನ ಇಬ್ಬರು ಮಕ್ಕಳು ಹಳ್ಳಿಯಲ್ಲಿಯೇ ಉಳಿದು ವ್ಯವಸಾಯ ಮಾಡಲಿ ಎಂಬುದು ತಾಯಿಯ ಇಚ್ಛೆ ಆಗಿತ್ತು. ಮಕ್ಕಳಿಬ್ಬರು ನಗರದಲ್ಲಿ ಅಂತಹ ತೃಪ್ತಿಕರ ಹುದ್ದೆಯಲ್ಲಿರದ ಕಾರಣ, ಊರಿಗೆ ಬಂದು ತಂದೆಯ ಆಸ್ತಿಯಲ್ಲಿ ಪಾಲು ತೆಗೆದುಕೊಂಡು ಬದುಕಲಾರಂಭಿಸಿದರು. ಕೆಲವೇ ತಿಂಗಳುಗಳಲ್ಲಿ ಅಣ್ಣನಿಗೆ ಹಳ್ಳಿಯ ಜೀವನ ಬೇಸರ ತಂದಿತು. ಆತನಿಗೆ ಹಳ್ಳಿಯ ದುಡಿಮೆಗೆ ತನ್ನನ್ನು ಒಗ್ಗಿಸಿಕೊಳ್ಳಲಾಗಲಿಲ್ಲ. ಅಗತ್ಯ ಸೌಲಭ್ಯಗಳಿಲ್ಲದೆ ಬದುಕು ಅಸ್ತವ್ಯಸ್ತವಾದಂತೆ ಅನ್ನಿಸಿ, ಈ ಹಳ್ಳಿ ಬದಲಾಗದ ಹೊರತು ತನಗಿಲ್ಲಿ ಇರಲು ಸಾಧ್ಯವೇ ಇಲ್ಲ... ಎಂದು ಜಮೀನನ್ನು ತಮ್ಮನಿಗೆ ವಹಿಸಿ ಪಟ್ಟಣದ ಹಾದಿ ಹಿಡಿದ. ಅವನ ಸಹೋದರ ತುಂಬ ಹೊಂದಾಣಿಕೆ ಸ್ವಭಾವ ಮತ್ತು ಚುರುಕು ಬುದ್ಧಿಯವನಾಗಿದ್ದು ಮೊದಲು ಹಳ್ಳಿಯ ಜೀವನಶೈಲಿಗೆ ಹೊಂದಿ ಕೊಳ್ಳುವಂತೆ ತನ್ನನ್ನು ಬದಲಿಸಿಕೊಂಡ. ತನ್ನ ತಿಳಿವಳಿಕೆಯಿಂದ ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರಗಳನ್ನು ವ್ಯವಸಾಯದಲ್ಲಿ ಬಳಸಿದ. ಹಳ್ಳಿಯ ಜನರಲ್ಲೂ ಅರಿವು ಮೂಡಿಸಿ, ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಿ ಆಧುನಿಕ, ಸುಸಂಸ್ಕೃತ ಜೀವನದ ಪರಿಚಯ ಮಾಡಿಸಿದ. ಅವನ ಪ್ರಗತಿಯನ್ನು ಗಮನಿಸಿದ ಊರ ಜನರು ನಿಧಾನವಾಗಿ ಅವನನ್ನು ಅನುಸರಿಸಿದರು. ಹೀಗೆ ಆತ ಕೆಲವೇ ವರ್ಷಗಳಲ್ಲಿ ಊರಿಗೆ ನಾಯಕನಾಗಿ ಬದಲಾದ. ಹಳ್ಳಿಯೂ ಸ್ವಚ್ಛ, ಸ್ವತಂತ್ರ, ಸುಖದ ಬೀಡಾಗಿ ಬದಲಾಯಿತು. ಹೀಗೆ ಸಹೋದರ ಮೊದಲು ತನ್ನನ್ನು ತಾನು ಬದಲಿಸಿಕೊಂಡು ನಂತರ ಊರನ್ನು ಬದಲಿಸಿದ.

ಪರಿಸ್ಥಿತಿಗೆ ತಕ್ಕಂತೆ ಬದಲಾಗಲು ಒಪ್ಪದ ಅಣ್ಣ ಇಷ್ಟವಿಲ್ಲದಿದ್ದರೂ ಮತ್ತದೇ ನಗರದ ಸಣ್ಣ ಉದ್ಯೋಗದ ಯಾಂತ್ರಿಕ ಜೀವನಕ್ಕೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾಯಿತು. ಈ ಕಥೆ ‘ವ್ಯಕ್ತಿ ಬದಲಾಗದೇ ಜಗತ್ತಿನ ಬದಲಾವಣೆ ಸಾಧ್ಯ ಇಲ್ಲ’ ಎನ್ನುವ ಅನುಭವದ ಮಾತಿಗೆ ಕನ್ನಡಿಯಾಗಿ ತೋರುತ್ತದೆ. ‘ಪರಿವರ್ತನೆ ಜಗದ ನಿಯಮ’ ಎಂದರಿತ ನಾವು ತುಂಬ ಸಲ ಜಗತ್ತೇ ಮೊದಲು ಬದಲಾಗಲಿ ಎಂದು ಬಯಸುತ್ತೇವೆಯೇ ಹೊರತು ನಾವು ನಮ್ಮೊಳಗನ್ನು ಬದಲಾಯಿಸಲು ಪ್ರಯತ್ನಪಡುವುದಿಲ್ಲ. ಒಬ್ಬ ವ್ಯಕ್ತಿ ಬದಲಾದರೆ ಊರು ಬದಲಾಗಬಲ್ಲದು. ಊರು ಬದಲಾದರೆ ಅದರ ಪ್ರಭಾವ ಆಯಾ ರಾಜ್ಯ, ಆಯಾ ದೇಶಗಳ ಮೇಲಾಗಬಹುದು.

‘ನಿನ್ನೆ ನಾನು ಚತುರನಾಗಿದ್ದೆ, ಅದಕ್ಕೆ ಜಗತ್ತು ಬದಲಾಗಲಿ ಎಂದು ಬಯಸಿದೆ. ಇಂದು ನಾನು ಬುದ್ಧಿವಂತನಾದೆ, ಅದಕ್ಕಾಗಿ ನಾನು ಬದಲಾಗಲು ಬಯಸುತ್ತಿದ್ದೇನೆ...’ ಎಂದು ಕವಿ ರೂಮಿ ಹೇಳುವಂತೆ ಶಿಕ್ಷಣ ಹಾಗೂ ಸ್ವಪ್ರಜ್ಞೆಯಿಂದ ಮಾತ್ರ ಬದಲಾವಣೆ ಸಾಧ್ಯ. ನಾವು ಮೊದಲು ಸಕಾರಾತ್ಮಕವಾಗಿ ಬದಲಾಗಿ ಜಗವ ಬದಲಿಸೋಣ ಅಲ್ಲವೇ?

ಸಸಿಯಾಗದು ಬೀಜ ಮೊಳಕೆಯೊಡೆಯದೆ ತುಂಬಿ ಹರಿಯದು ನದಿ ಹಳ್ಳಕೊಳ್ಳ ಸೇರದೆ ಪರಿವರ್ತನೆ ಹಸ್ತಾಂತರ ವ್ಯಕ್ತಿಯಿಂದ ಜಗಕೆ ಬೆಳಕು ಸಾಗುವುದಾಗ ಮನದಿಂದ ಮನಕೆ.

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net