ಕಿರುವಾರ ಎಸ್.ಸುದರ್ಶನ್ ಕೋಲಾರ
ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಮಾವು ಇಳುವರಿ ಕುಸಿತಗೊಂಡಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕಳೆದ ವರ್ಷ ಎಂದೂ ಕಂಡಿರದ ಬರ ಪರಿಸ್ಥಿತಿ ಎದುರಾಗಿತ್ತು, ಬಿಸಿಲಿನ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ಬಿಸಿಲ ಧಗೆಯಿಂದ ಜನ ರೋಸಿ ಹೋಗಿದ್ದರು. ಬರದ ಛಾಯೆ, ಬೇಸಿಗೆ ಬಿಸಿಲಿನ ಬಿಸಿ ಮಾವು ಸಲಿಗೂ ತಟ್ಟ್ಟಿದ್ದು ಬೆಳೆಗಾರರನ್ನು ಕಂಗೆಡಿಸಿದೆ.
ಜಿಲ್ಲೆಯಲ್ಲಿ ಒಟ್ಟು 96,805 ಹೆಕ್ಟೇರ್ ತೋಟಗಾರಿಕೆ ಪ್ರದೇಶವಿದ್ದು, ಆ ಪೈಕಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ ತಾಲೂಕಿನ ಬಹುತೇಕ ರೈತರು ಮಾವು ಬೆಳೆಯನ್ನೇ ನಂಬಿ ಬದುಕು ಸಾಗಿಸುತ್ತಾರೆ. ಆದರೆ ಈ ಬಾರಿ ಮಳೆ ಕೊರತೆ ಹಾಗೂ ಹೆಚ್ಚಿದ ಉಷ್ಣಾಂಶದಿಂದ 39,331.27 ಹೆಕ್ಟೇರ್ ಪ್ರದೇಶದಲ್ಲಿ ಶೇ.70-80 ಮಾವು ಇಳುವರಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ನಡಿ 88.49 ಕೋಟಿ ರೂ. ಪರಿಹಾರ ಕೋರಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಅವರಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಪತ್ರ ಬರೆದಿದ್ದಾರೆ.
- “ಹೂವು’ ಬಿಡುವ ಹಂತದಲ್ಲೇ ಉದುರಿತ್ತು
ಡಿಸೆಂಬರ್ ತಿಂಗಳಲ್ಲಿ ಮಾವು ಹೂವು ಬಿಡುತ್ತದೆ, ಜನವರಿ, ೆಬ್ರವರಿ, ಮಾರ್ಚ್ ಮಾಹೆಯಲ್ಲಿ ಒಂದೆರಡು ಬಾರಿ ಮಳೆಯಾದರೆ ಮಾವಿನ ಇಳುವರಿ ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳುತ್ತದೆ. ೆಬ್ರವರಿಯಿಂದ ಸತತವಾಗಿ ನಾಲ್ಕು ತಿಂಗಳು ಮಳೆಯಿಲ್ಲದ ಕಾರಣ, ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ಹೂವು ಉದುರಿದ್ದು, ಕಾಯಿ ಕಟ್ಟುವ ಸಮಯದಲ್ಲಿ 36 ರಿಂದ39 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ಇದ್ದ ಕಾರಣ ಮಾವಿನ ಕಾಯಿ ಗಾತ್ರವೂ ತೀರಾ ಚಿಕ್ಕದಾಗಿದೆ. ಇದರ ನಡುವೆ ಮಳೆ ಬಾರದ ಕಾರಣ ಹೂವು ಬಿಡುವ ಹಂತದಲ್ಲೇ ಉದುರಿತ್ತು. ಇದನ್ನು ತಡೆಯಲು ಹಲವು ಸುತ್ತು ಔಷಧ ಸಿಂಪಡಿಸಿದರೂ ಪ್ರಯೋಜನವಾಗಿಲ್ಲ.
- ಶೇ.70-80 ಇಳುವರಿ ಕುಸಿತ
ಕಾಯಿ ಆಗಬೇಕಿದ್ದ ಪಿಂದೆ ಬಿಸಿಲಿನ ತಾಪಕ್ಕೆ ಹಳದಿ ಬಣ್ಣಕ್ಕೆ ತಿರುಗಿ ಉದುರಿದೆ. ತುಸು ದೊಡ್ಡದಾಗಿ ಬಲಿತಿರುವ ಮಾವಿನ ಕಾಯಿಗೆ ನೀರಿನ ಅಂಶ ಸಿಗದೆ ಬಿಸಿಲ ತಾಪಕ್ಕೆ ಸೊರಗಿದೆ. ಈ ಹಿನ್ನೆಲೆಯಲ್ಲಿ ಮಾವಿನ ತಾಕುಗಳಿಗೆ ಅಧಿಕಾರಿಗಳ ತಂಡ ಕಳುಹಿಸಿ ಪರಿಶೀಲಿಸಿ ನೆರವಿಗೆ ಬರಬೇಕೆಂದು ಮಾವು ಬೆಳೆಗಾರರರು ಇಲಾಖಾಧಿಕಾರಿಗಳನ್ನು ಒತ್ತಾಯ ಮಾಡಿದ್ದರು. ಮಾವಿನ ಗಿಡ ಹೂವು ಬಿಡುವ ಹಾಗೂ ಕಾಯಿ ಕಟ್ಟುವ ಸಂದರ್ಭದಲ್ಲಿ ವಾಡಿಕೆಯಂತೆ ಮಳೆಯಾಗದೆ, ಉಷ್ಣಾಂಶ ಹೆಚ್ಚಿದ್ದರಿಂದ 2023-24ನೇ ಸಾಲಿನ ಹಂಗಾಮಿನಲ್ಲಿ ಶೇ.70-80 ಇಳುವರಿ ಕುಂಠಿತವಾಗಿದೆ. ಅಲ್ಲದೇ, ಇನ್ನುಳಿದ ಪ್ರದೇಶದಲ್ಲಿ ಮಾವಿನ ಕಾಯಿಗಳ ಗಾತ್ರ ಕಡಿಮೆಯಾಗಿ ಗುಣಮಟ್ಟ ಕಳೆದುಕೊಂಡಿದ್ದು, ಮಾರುಕಟ್ಟೆಗೆ ಸೂಕ್ತ ಇಲ್ಲದಿರುವ ಕಾರಣ ರೈತರು ಪರಿಹಾರ ಕೋರಿ ತೋಟಗಾರಿಕೆ ಇಲಾಖೆಗೆ ಮನವಿ ಸಲ್ಲಿಸಿದ್ದರು.
- ಜಂಟಿ ಸಮೀಕ್ಷೆ ತಂಡದಿಂದ ವರದಿ
ಜಂಟಿ ಸಮೀಕ್ಷೆಗೆ ತಂಡ ರಚಿಸಿ ವರದಿ ನೀಡಲು ಸೂಚಿಸಲಾಗಿತ್ತು. ತೋಟಗಾರಿಕೆ ಮಹಾವಿದ್ಯಾಲಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಶ್ರೀನಿವಾಸಪುರ, ಕೋಲಾರ ಹಾಗೂ ಮುಳಬಾಗಿಲು ತಾಲೂಕಿನ 12 ಕಡೆ ಮಾವು ಬೆಳೆ ಹಾನಿ ಪರಿಶೀಲಿಸಿ ವರದಿ ನೀಡಿತ್ತು. ಇದರ ನಡುವೆ, ನಷ್ಟದ ಪ್ರತಿ ಹೆಕ್ಟೇರ್ಗೆ 22,500 ರೂ. ಪರಿಹಾರ ನೀಡಲು ಕೋರಲಾಗಿದೆ. ಕಳೆದ ಎರಡು ವರ್ಷ ಮಳೆ ಹೆಚ್ಚಾದ ಕಾರಣ ಮಾವು ಬೆಳೆ ನಷ್ಟ ಉಂಟಾಗಿತ್ತು. ಈ ಬಾರಿ ಬಿಸಿಲಿನ ತಾಪಕ್ಕೆ ಹೂವು ಹಾಗೂ ಪಿಂದೆಗಳು ಉದುರಿರುವುದನ್ನು ಗಮನಿಸಿದರೆ 10 ಟನ್ ಬರುತ್ತಿದ್ದ ಮಾವಿನ ಫಸಲು ಈ ಬಾರಿ 1 ರಿಂದ 2 ಟನ್ ಸಿಗುವುದೂ ಕಷ್ಟವಾಗಿದೆ. ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ನೀಡಲು ಸರ್ಕಾರ ಕ್ರಮವಹಿಸಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ. - ಪ್ರಮುಖ ತಳಿಗಳು
ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ತಾಲೂಕು ವ್ಯಾಪ್ತಿಯಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ತೋತಾಪುರ, ದಶೇರಿ, ಬಾದಾಮಿ, ಬೇನಿಷ, ಸೇಂದೂರ, ನೀಲಂ ತಳಿಗಳ ಇಳುವರಿ ಕುಂಠಿತವಾಗಿದೆ ಎಂದು ತಂಡ ಸರ್ಕಾರಕ್ಕೆ ವರದಿ ನೀಡಿದೆ.
ಕೋಟ್…
ಜಿಲ್ಲೆಯಲ್ಲಿ ಈ ವರ್ಷ ಬಿಸಿಲಿನ ತಾಪ ಹೆಚ್ಚಿದ್ದ ಕಾರಣ ಮಾವು ಇಳುವರಿ ಕುಂಠಿತಗೊಂಡಿದೆ. ಬೆಳೆ ಹಾನಿಯಾಗಿರುವ ಬಗ್ಗೆ ವರದಿ ತಯಾರಿಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ಬೆಳೆಗಾರರ ಬ್ಯಾಂಕ್ ಖಾತೆ ಜಮೆಯಾಗುತ್ತದೆ.- ಎಸ್.ಆರ್.ಕುಮಾರಸ್ವಾಮಿ
ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೋಲಾರ.
ತಾಲೂಕುವಾರು ಬೆಳೆ ನಷ್ಟ
ತಾಲೂಕು ನಷ್ಟ (ಹೆಕ್ಟೇರ್) ಪರಿಹಾರ (ಲಕ್ಷ ರೂ.ಗಳಲ್ಲಿ)
ಶ್ರೀನಿವಾಸಪುರ 22,993.45 5,173.53
ಮುಳಬಾಗಿಲು 7,285.50 1,639.24
ಕೋಲಾರ 5,670.18 1,275.79
ಮಾಲೂರು 1,561.16 351.28
ಬಂಗಾರಪೇಟೆ 307.03 69.08
ಕೆಜಿಎಫ್ 1,513.85 340.62
ಒಟ್ಟು 39,331.27 8,849.54