

ಕೊಚಿ: ಕರೊನಾ ವೈರಸ್ ಓಡಿಸಲು ಇಡೀ ವಿಶ್ವದ ವೈದ್ಯಕೀಯ ಕ್ಷೇತ್ರ ಔಷಧ ಕಂಡುಹಿಡಿಯುವಲ್ಲಿ ನಿರತರಾಗಿದ್ದರೆ, ಹಲವಾರು ಮಂದಿ ತಮ್ಮದೇ ಆದ ರೀತಿಯಲ್ಲಿ ಈ ವೈರಸ್ನಿಂದ ಮುಕ್ತಿ ಪಡೆಯಲು ಹವಣಿಸುತ್ತಿದ್ದಾರೆ.
ಇದೀಗ ಕೇರಳದ ನಿವಾಸಿ ಅನಿಲನ್ ಎನ್ನುವವರು ತಮ್ಮ ದೇವರ ಪೀಠದಲ್ಲಿ ಕರೊನಾ ದೇವಿಯನ್ನು ಕುಳ್ಳರಿಸಿ ಅದಕ್ಕೆ ನಿತ್ಯವೂ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ. "ನಾನು ಕರೊನಾವೈರಸ್ ಅನ್ನು ದೇವತೆಯಾಗಿ ಪೂಜಿಸುತ್ತಿದ್ದೇನೆ ಮತ್ತು ಆರೋಗ್ಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ದಿನವೂ ಈ ದೇವಿಯ ಮೊರೆ ಹೋಗುತ್ತಿದ್ದೇನೆ ಎನ್ನುತ್ತಾರೆ ಇವರು.
ವೃತ್ತಿಪರರು, ಪೊಲೀಸ್ ಸಿಬ್ಬಂದಿ ಮತ್ತು ವಿಜ್ಞಾನಿಗಳು ಈ ವೈರಸ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಇವುಗಳನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ. ಎಲ್ಲವೂ ಕೈ ಮೀರಿದಾಗ ಮನುಷ್ಯರು ಸಹಜವಾಗಿ ದೇವರ ಮೊರೆ ಹೋಗುತ್ತಾರೆ. ಆದ್ದರಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೈರಸ್ ವಿರುದ್ಧ ನಾನು ಈ ದೇವಿಯದ್ದೇ ಮೊರೆ ಹೋಗಿದ್ದೇನೆ ಎನ್ನುತ್ತಾರೆ ಅನಿಲನ್.
ಇವರ ಪೂಜೆಯ ಫೋಟೋ ವೈರಲ್ ಆಗುತ್ತಿದ್ದಂತೆಯೇ ಹಲವಾರು ನೆಟ್ಟಿಗರು ಅನಿಲನ್ ಕ್ರಮಕ್ಕೆ ಹಾಸ್ಯ ಮಾಡುತ್ತಿದ್ದಾರೆ. ಇದು ಪ್ರಚಾರದ ಗೀಳು, ಎಲ್ಲವೂ ಸುಮ್ಮನೇ ಪ್ರಚಾರದ ಹುಚ್ಚಿಗಾಗಿ ಮಾಡುತ್ತಿದ್ದಾರೆ ಇತ್ಯಾದಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ತಮಗೆ ಯಾವುದೇ ಸಮಸ್ಯೆ ಇಲ್ಲ. ಹೇಳುವವರು ಹೇಳಿಕೊಳ್ಳಲಿ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಕರೊನಾ ದೇವಿ ಮೇಲೆ ನಂಬಿಕೆ ಇದೆ. ಇದನ್ನು ನಿತ್ಯವೂ ಪೂಜೆ ಮಾಡಿದರೆ ವೈರಸ್ ನಮ್ಮನ್ನು ಬಾಧಿಸುವುದಿಲ್ಲ ಎಂದು ಧೈರ್ಯದಿಂದ ನುಡಿಯುತ್ತಾರೆ ಅನಿಲನ್.
ದೇವಾಲಯಗಳು ಸೇರಿದಂತೆ ಧಾರ್ಮಿಕ ಪೂಜಾ ಸ್ಥಳಗಳನ್ನು ತೆರೆಯುವ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿರುವ ಅನಿಲನ್, ಜನರು ಲಾಕ್ಡೌನ್ ನಿಯಮ ಮೀರಿ, ಹೊರಗಡೆ ಹೋಗಿ, ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಬದಲು ತಮ್ಮ ತಮ್ಮ ಮನೆಯಲ್ಲಿಯೇ ಈ ರೀತಿ ಪೂಜೆ ಸಲ್ಲಿಸಿದರೆ ಒಳ್ಳೆಯದು ಎನ್ನುತ್ತಾರೆ.
ಕೆಲವು ಮಂದಿ ಪೂಜಾ ಸಮಯದಲ್ಲಿ ದೇವಿಗೆ ಕಾಣಿಕೆ ನೀಡಲು ಬರುತ್ತಾರೆ ಎನ್ನುವ ಅನಿಲನ್, ನಾನು ಯಾವುದೇ ಕಾರಣಕ್ಕೂ ಕಾಣಿಕೆ ಸ್ವೀಕರಿಸುವುದಿಲ್ಲ ಎಂದಿದ್ದಾರೆ,
ಅಸ್ಸಾಂನ ಕೆಲವು ಭಾಗಗಳಲ್ಲಿ ಈಗಾಗಲೇ ಮಹಿಳೆಯರು 'ಕರೊನಾ ದೇವಿ'ಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಬಗ್ಗೆ ವರದಿಯಾಗಿದೆ. (ಏಜೆನ್ಸೀಸ್)