ಪರಪುರುಷನ ಜತೆ ಪತ್ನಿ ತಿರುಗಾಟ; ನಡು ಬೀದಿಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಪತಿ

HW Fight
Published on

ಹರಿಯಾಣ: ಕೆಲವರು ಮದುವೆಯಾದ ನಂತರವೂ ವಿವಾಹೇತರ ಸಂಬಂಧವನ್ನೂ ಹೊಂದುವ ಮೂಲಕ ತಮ್ಮ ಸುಂದರವಾದ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ. ಅನೈತಿಕ ಸಂಬಂಧವೂ ಅನೇಕರ ಜೀವನ ಕೆಡೆಸಿದ್ದು, ಕೆಲವೊಮ್ಮೆ ಈ ವಿಚಾರಗಳಿಗೆ ಕೊಲೆಗಳು ಸಹ ನಡೆದಿವೆ. ಇದೀಗ ಇದಕ್ಕೆ ಪೂರಕವೆಂಬಂತೆ ತನ್ನ ಪತ್ನಿ ಬೇರೊಬ್ಬನ ಜೊತೆ ತಿರುಗಾಡುತ್ತಿರುವುದನ್ನು ನೋಡಿದ ಪತಿ ಆಕೆಯ ಮೇಲೆ ನಡುರಸ್ತೆಯಲ್ಲೇ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಹರಿಯಾಣದ ಪಂಚ್​ಕುಲಾದಲ್ಲಿ ನಡೆದಿದೆ.

ಪತಿ ಬೇಸ್​ಬಾಲ್​ ಬ್ಯಾಟ್​ನಿಂದ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ತನ್ನ ಪತ್ನಿ ಬೇರೊಬ್ಬನ ಜೊತೆ ಕಾರಿನಲ್ಲಿ ತಿರುಗಾಡುತ್ತಿರುವುದನ್ನು ನೋಡಿದ್ದಾನೆ. ಬಳಿಕ ಫಾಲೋ ಮಾಡಿ ಪಾರ್ಕ್​ ಒಂದರಲ್ಲಿ ಇಬ್ಬರು ಕುಳಿತಿರುವಾಗ ಏಕಾಏಕಿ ಕಾರಿನ ಗಾಜನ್ನು ಹೊಡೆದು ಪತ್ನಿಯ ಮೇಲೆ ಬೇಸ್​ಬಾಲ್​ ಬ್ಯಾಟಿನಿಂದ ಹಲ್ಲೆ ಮಾಡುತ್ತಾನೆ. ಈ ವೇಳೆ ಮಹಿಳೆ ಜೊತೆಯಲ್ಲಿದ್ದ ವ್ಯಕ್ತಿ ಆತನನ್ನು ತಡೆಯಲು ಮುಂದಾಗದೆ ಸುಮ್ಮನೆ ನಿಂತಿರುವುದನ್ನು ನೋಡಬಹುದಾಗಿದೆ. ಇದನ್ನು ನೋಡಿದ ಪಾರ್ಕ್​ನಲ್ಲಿದ್ದ ಜನ ಮಧ್ಯಪ್ರವೇಶಿಸಿ ಗಲಾಟೆಯನ್ನು ಬಿಡಿಸಿ ಬುದ್ಧಿವಾದ ಹೇಳುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಇತ್ತ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಹಲ್ಲೆಗೊಳಗಾದ ಮಹಿಳೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಮಹಿಳೆ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿದ್ದಾರೆ. ಕೆಲವರು ಮಹಿಳೆಯ ಪತಿ ನಡೆದುಕೊಂಡ ರೀತಿಯನ್ನು ಬೆಂಬಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net