ದೇವರು ಲ್ಯಾಂಬೊರ್ಗಿನಿ ಕಾರು ಕೊಡುತ್ತಾನೆ ಅಂತ ದಿನಗಟ್ಟಲೆ ಉಗ್ರ ಉಪವಾಸ ಮಾಡಿದ; ಎಲ್ಲ ಗರ್ಲ್​ಫ್ರೆಂಡ್​ಗಾಗಿ...

Untitled-1
Published on

ನವದೆಹಲಿ: ನಂಬಿಕೆಗೆ ಮಿತಿ ಇಲ್ಲ, ಆದರೆ ಮೂಢನಂಬಿಕೆಗೆ ಒಂದು ಮಿತಿ ಇದ್ದೇ ಇರುತ್ತದೆ. ಇಲ್ಲೊಬ್ಬ 40 ದಿನಗಳ ಕಾಲ ಹಗಲು-ರಾತ್ರಿ ಅನ್ನ-ನೀರು ತ್ಯಜಿಸಿದರೆ ದೇವರು ಲ್ಯಾಂಬೊರ್ಗಿನಿ ಕಾರು ಕೊಟ್ಟು ಬಿಡುತ್ತಾನೆ ಎಂದುಕೊಂಡು ಹಾಗೆ ಮಾಡಲು ಮುಂದಾಗಿದ್ದಾನೆ. ಕೊನೆಗೆ ಅನ್ನ-ನೀರು ಬಿಟ್ಟವನು ಪ್ರಾಣ ಬಿಡುವ ಹಂತಕ್ಕೆ ತಲುಪಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಜಿಂಬಾಬ್ವೆಯ ಬಿಂದುರ ಎಂಬಲ್ಲಿನ ಮಾರ್ಕ್​ ಮುರಾದಿರಾ ಎಂಬಾತ ನಿರುದ್ಯೋಗಿ. ಸಾಲದ್ದಕ್ಕೆ ಜತೆಗೊಬ್ಬಳು ಗರ್ಲ್​ಫ್ರೆಂಡ್. ಅವಳಿಗೆ ಸುಮಾರು 1.54 ಕೋಟಿ ರೂ. ಮೊತ್ತದ ಲ್ಯಾಂಬೊರ್ಗಿನಿ ಕಾರು ಉಡುಗೊರೆಯಾಗಿ ಕೊಟ್ಟು ಇಂಪ್ರೆಸ್​ ಮಾಡಬೇಕು ಎಂಬ ದುಬಾರಿ ಕನಸು. ಆದರೆ ಕೆಲಸವಿಲ್ಲದೆ ಅಂಥ ಐಷಾರಾಮಿ ಕಾರನ್ನು ಖರೀದಿಸುವುದ ಹೇಗೆ ಎಂಬ ಚಿಂತೆಯಲ್ಲಿದ್ದ ಇವನಿಗೆ ಇಂಥದ್ದೊಂದು ಐಡಿಯಾ ಯಾರು ಕೊಟ್ಟರೋ ಗೊತ್ತಿಲ್ಲ.

ಅವನು 40 ದಿನಗಳ ಕಾಲ ಹಗಲು-ರಾತ್ರಿ ಆಹಾರ ತ್ಯಜಿಸಿ ಉಪವಾಸ ಮಾಡಿದರೆ ದೇವರು ಲ್ಯಾಂಬೊರ್ಗಿನಿ ಕಾರು ಕರುಣಿಸಿಬಿಡುತ್ತಾನೆ ಎಂದು ಭಾವಿಸಿದ್ದ. ನಗರ ಪ್ರದೇಶದಲ್ಲಿದ್ದರೆ ಉಪವಾಸಕ್ಕೆ ಭಂಗ ಬರುತ್ತದೆ ಎಂದುಕೊಂಡ ಆತ ಅದಕ್ಕಾಗಿ ಆಹಾರ ಸಿಗದ ಬೆಟ್ಟವೊಂದಕ್ಕೆ ಹೋಗಿದ್ದ.

ಕೆಲವು ದಿನಗಳಿಂದ ಕಾಣಿಸದ ಗೆಳೆಯ ಬೆಟ್ಟದ ಮೇಲಿರುವುದನ್ನು ಅದು ಹೇಗೋ ಪತ್ತೆ ಮಾಡಿದ ಸ್ನೇಹಿತರು, ಅನ್ನ-ನೀರು ಸಿಗದೆ ನಿತ್ರಾಣಗೊಂಡು ಸಾಯುವ ಸ್ಥಿತಿಯಲ್ಲಿದ್ದ ಆತನನ್ನು ಕೂಡಲೇ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಆತ 33 ದಿನಗಳ ಉಪವಾಸ ಮಾಡಿದ್ದ ಎನ್ನಲಾಗಿದೆ.

ಗೆಳೆಯನ ಪರಿಸ್ಥಿತಿ ಕಂಡು ಸ್ನೇಹಿತರು ಲ್ಯಾಂಬೊರ್ಗಿನಿ ಕಾರ್​ಗಾಗಿ ಫಂಡ್​ರೈಸ್ ಮಾಡಿದರೂ ಸಂಗ್ರಹವಾಗಿದ್ದು ಬರೀ 3 ಸಾವಿರ ರೂಪಾಯಿ. ಕೊನೆಗೆ ಅದನ್ನು ಆಸ್ಪತ್ರೆ ಖರ್ಚಿಗೆ ಬಳಸಲಾಗಿದ್ದು, ಸದ್ಯ ಚಿಕಿತ್ಸೆಯಲ್ಲಿರುವ ಮಾರ್ಕ್​ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net