

ಮಧ್ಯಪ್ರದೇಶ: ಅಂದಿನ ಸಮಯದಲ್ಲಿ ನಮ್ಮ ಹುಡುಗಿಗೆ ಒಂದೊಳ್ಳೆ ಹುಡುಗ ಸಿಕ್ಕರೆ ಸಾಕಪ್ಪ ಅಂತಿದ್ದರು ಹಿರಿಯರು. ಆದರೆ ಇಂದು ಅದು ಉಲ್ಟಾ ಆಗಿದೆ. ಕಾರಣ, ವಿವಾಹಕ್ಕೆ ಯುವತಿಯರ ಕೊರತೆ! ಹುಡುಗರಿಗೆ ಹುಡುಗಿಯರು ಸಿಗುತ್ತಿಲ್ಲ ಎಂಬ ಅಳಲು ಇದೀಗ ಅನೇಕ ಪೋಷಕರು ಹಾಗೂ ಯುವಕರದ್ದಾಗಿದೆ. ಒಳ್ಳೆಯ ವಿದ್ಯಾರ್ಹತೆ, ಉತ್ತಮ ಕೆಲಸ, ನಿರೀಕ್ಷೆಗೆ ತಕ್ಕಂತ ಸಂಬಳ ಎಲ್ಲವೂ ಇದ್ದರು ಕೂಡ ಹುಡುಗರಿಗೆ ವಿವಾಹವಾಗಲು ಯುವತಿಯರು ಸಿಗುವುದು ಮಾತ್ರ ಕಷ್ಟಕರ ಸಂಗತಿಯಾಗಿದೆ.
ಇದೇ ರೀತಿ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತನಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ಬೇಸತ್ತು, ವಿಭಿನ್ನ ಪ್ರಯತ್ನವೊಂದಕ್ಕೆ ಮುಂದಾಗಿದ್ದಾರೆ. ತನ್ನದೇ ಒಂದು ಇ-ರಿಕ್ಷಾ ತಯಾರಿಸಿ, ಅದರಲ್ಲಿ ತನ್ನ ವಿದ್ಯಾರ್ಹತೆ, ಉದ್ಯೋಗ, ಸಂಬಳ, ಜಾತಕ ಸೇರಿದಂತೆ ಇತ್ಯಾದಿ ವಿವರಗಳ ಬೋರ್ಡ್ ನಮೂದಿಸಿದ್ದಾರೆ. ಈ ಗಾಡಿಯ ಮೂಲಕ ರಸ್ತೆಯಲ್ಲಿ ಸಂಚರಿಸುತ್ತ, ತಾನು ಮದುವೆಯಾಗಲು ಸಜ್ಜಾಗಿದ್ದೇನೆ, ಹುಡುಗಿ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ತನ್ನ ವಿಭಿನ್ನ ಪ್ರಯತ್ನದ ಕುರಿತು ಮಾತನಾಡಿದ ದೀಪೇಂದ್ರ ರಾಥೋಡ್, "ಸಮಾಜದಲ್ಲಿ ಯುವತಿಯರ ಕೊರತೆಯಿಂದ ಮದುವೆ ಸಾಧ್ಯವಾಗುತ್ತಿಲ್ಲ. ಜಾತಿ ಅಥವಾ ಧರ್ಮದ ವ್ಯತ್ಯಾಸವು ತನಗೆ ಸಮಸ್ಯೆಯಲ್ಲ. ಯಾರಾದರೂ ನನ್ನನ್ನು ಮದುವೆಯಾಗಲು ಬಯಸಿದರೆ ಖಂಡಿತವಾಗಿ ಸಂಪರ್ಕಿಸಿ, ವಿಷಯ ಪ್ರಸ್ತಾಪಿಸಬಹುದು" ಎಂದು ಹೇಳಿದರು.
"ಈ ಬಗ್ಗೆ ನನ್ನ ಪೋಷಕರಿಗೆ ಬೇಸರವಿಲ್ಲ. ಬದಲಿಗೆ ಇದಕ್ಕೆ ಅವರ ಬೆಂಬಲವಿದೆ. ನನ್ನ ಪೋಷಕರು ಪೂಜೆಯಲ್ಲಿ ನಿರತರಾಗಿರುವ ಕಾರಣ ನನಗೆ ಹುಡುಗಿಯನ್ನು ಹುಡುಕಲು ಅವರಿಗೆ ಸಮಯವಿಲ್ಲ. ಆದ್ದರಿಂದ ನಾನು ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ" ಎಂದಿದ್ದಾರೆ ದೀಪೇಂದ್ರ ರಾಥೋಡ್,(ಏಜೆನ್ಸೀಸ್).