ಸೇನಾ ಅಧಿಕಾರಿ ಎಂದು ಹೇಳಿಕೊಂಡು 88,000 ರೂ. ಲಪಟಾಯಿಸಿದ ಕಳ್ಳರು ಈಗ ಪೊಲೀಸರ ಅತಿಥಿಗಳು!

mumbai police
Published on

ಮುಂಬೈ: ತಾನು ಸೇನಾ ಅಧಿಕಾರಿ ಎಂದು ಹೇಳಿಕೊಂಡು 18 ವರ್ಷದ ಯುವತಿಗೆ 88,000 ರೂ. ವಂಚಿಸಿದ್ದ ರಾಜಸ್ಥಾನ ಮೂಲದ ಕಳ್ಳರನ್ನು ಇದೀಗ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆರ್ಮಿ ಅಧಿಕಾರಿಯಂತೆ ನಟಿಸಿ, 18 ವರ್ಷದ ಗ್ರಾಫಿಕ್ ಡಿಸೈನರ್‌ಗೆ 88,000 ರೂಪಾಯಿ ವಂಚಿಸಿದ ಆರೋಪದ ಮೇಲೆ ರಾಜಸ್ಥಾನದ ಅಲ್ವಾರ್‌ನ ಇಬ್ಬರು ವ್ಯಕ್ತಿಗಳನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ರಾಹುಲ್ ಖಾನ್ (21) ಮತ್ತು ಜಫ್ರುದ್ದೀನ್ ಖಾನ್ (25) ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಜುಲೈ 7 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ದೂರಿನ ಅನ್ವಯ, ಆರೋಪಿಗಳಲ್ಲಿ ಒಬ್ಬ ಯುವತಿಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿ, ನನ್ನ ತಂಗಿ ಮದುವೆಗೆ ಆಮಂತ್ರಣ ಕಾರ್ಡ್​​ ಅನ್ನು ಡಿಸೈನ್​ ಮಾಡಿಕೊಡಬೇಕು ಎಂದು ಕೇಳಿದ್ದಾನೆ. ಇದಕ್ಕೆ 9000 ರೂ. ಆಗುತ್ತದೆ ಎಂದು ಡಿಸೈನರ್​ ಹೇಳಿದ್ದಾರೆ. ಕೆಲಸ ಮುಗಿದ ಬಳಿಕ ಹಣ ಪಾವತಿ ಮಾಡಲು ನಿಮ್ಮ ಕ್ಯೂಆರ್ ಕೋಡ್ ಕೊಡಿ ಎಂದು ಯುವತಿಯನ್ನು ಕೇಳಿದ್ದಾರೆ. ಸ್ಕ್ಯಾನರ್​​ ಅನ್ನು ದುರ್ಬಳಕೆ ಮಾಡಿಕೊಂಡ ಕಳ್ಳರು, ಆಕೆಯ ಖಾತೆಯಿಂದ 88,059 ರೂ.ಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಯುವತಿಯ ಬ್ಯಾಂಕ್​ ಖಾತೆಯಲ್ಲಿದ್ದ ಹಣ ರಾಹುಲ್ ಖಾನ್ ಖಾತೆಗೆ ಹೋಗಿದ್ದು, ಜಫ್ರುದ್ದೀನ್ ಆ ಹಣವನ್ನು ಎಟಿಎಂನಿಂದ ಡ್ರಾ ಮಾಡಿಕೊಂಡಿದ್ದಾನೆ. ನಂತರ ಯುವತಿ ಮುಂಬೈನ ವಿಪಿ ರಸ್ತೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ವಂಚನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net