

ಮಂಗಳೂರು: ದೈಹಿಕ ಸಮಸ್ಯೆಗಳಂತೆಯೇ ಮಾನಸಿಕ ಆರೋಗ್ಯಕ್ಕೂ ಹೆಚ್ಚಿನ ಮಹತ್ವ ನೀಡಬೇಕು, ಮಾನಸಿಕ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂದು ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಹೇಳಿದರು.
ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಮಾನಸಿಕ ಆರೋಗ್ಯ ಕಾಳಜಿ ಕಾಯಿದೆ- 2017 ಮತ್ತು ವಿಕಲಾಂಗ ಚೇತನರ ಹಕ್ಕುಗಳ ಕಾಯಿದೆ- 2016ರ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ಆರೋಗ್ಯದ ಲಕ್ಷಣಗಳು ಬೇಗನೆ ಕಂಡು ಬರುವುದಿಲ್ಲ. ದೈಹಿಕ ಸಮಸ್ಯೆಗಳು ಬಂದಾಗ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಲು ನೀಡುವ ಪ್ರಾಮುಖ್ಯತೆಯನ್ನು ಉತ್ತಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ನೀಡುವುದು ಅತೀ ಮುಖ್ಯ ಎಂದವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ, ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಹತ್ತಿರದ ಸಂಬಂಧವಿದ್ದು, ಮಾನಸಿಕ ಆರೋಗ್ಯ ಸಮಸ್ಯೆಯದಾಗ ದೈಹಿಕ ಆರೋಗ್ಯ ಕೂಡ ಹದಗೆಡುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚದಂತೆ ಉದ್ವೇಗ, ಖಿನ್ನತೆಯಂತಹ ಸ್ಥಿತಿಗಳು ನಿರ್ಮಾಣವಾಗುತ್ತದೆ. ಇಂತಹ ವ್ಯಕ್ತಿಗಳ ಕುರಿತು ಅವರ ಜತೆಗಿದ್ದವರು ಕಾಳಜಿ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಆನಂದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಒತ್ತಡದ ನಡುವೆಯೂ ಸರ್ಕಾರಿ ಅಧಿಕಾರಿಗಳು ಮನಸ್ಸಿನ ಸ್ಥಿರತೆ ಕಾಪಾಡಿಕೊಂಡು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪಾನೆಲ್ ಅಡ್ವಕೇಟ್ ಪ್ರತಿಮಾ ಎಸ್. ಹಾಗೂ ಮನೋರೋಗ ತಜ್ಞರಾದ ಡಾ.ಸುಪ್ರಿತಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಾನಸಿಕ ಆರೋಗ್ಯ ವಿಭಾಗದ ಉಪ ನಿರ್ದೇಶಕರಾದ ಡಾ.ರಜನಿ ಪಿ. ಅವರು ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾನಸಿಕ ಆರೋಗ್ಯದ ಕಾಳಜಿ ಬಗ್ಗೆ ತಿಳಿಸಿದರು.
ಸಂಚಾರ ಎಸಿಪಿ ಗೀತಾ ಕುಲಕರ್ಣಿ, ವಿಕಲಚೇತನ ಇಲಾಖೆಯ ಉಪ ನಿರ್ದೇಶಕ ಗೋಪಾಲಕೃಷ್ಣ ಹಾಗೂ ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಉಪಸ್ಥಿತರಿದ್ದರು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ನಿವಾರಣಾಧಿಕಾರಿ ಡಾ.ಸುದರ್ಶನ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು.
ಎಂಎನ್ಜಿ 5 ಜುಲೈ ಝೆಡ್ಪಿ
ಮಾನಸಿಕ ಆರೋಗ್ಯ ಕಾಳಜಿ ಕಾಯಿದೆ- 2017 ಮತ್ತು ವಿಕಲಾಂಗ ಚೇತನರ ಹಕ್ಕುಗಳ ಕಾಯಿದೆ- 2016ರ ಕುರಿತು ನಡೆದ ಕಾರ್ಯಾಗಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಆನಂದ್ ಕುಮಾರ್, ಸಂಚಾರ ಎಸಿಪಿ ಗೀತಾ ಕುಲಕರ್ಣಿ ಮೊದಲಾದವರಿದ್ದರು.