More

    ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಪ್ರಶಾಂತ್ ಹಿರೇಮಠ ಆಯ್ಕೆ

    ನಗರದ ಹಿರಿಯ ರಂಗಕರ್ಮಿ ಪ್ರಶಾಂತ್ ಹಿರೇಮಠ ಅವರು ಕಲಬುರಗಿಯ ರಂಗ ಸಂಗಮ ವೇದಿಕೆಯ ರಾಜ್ಯ ಮಟ್ಟದ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಫಲಕವನ್ನು ಒಳಗೊಂಡಿದೆ. ಜು. 18ರಂದು ಕಲಬುರಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

    ಪ್ರಶಾಂತ್ ಹಿರೇಮಠ ಅವರು ಮೈಸೂರು ರಂಗಾಯಣದ ಕಲಾವಿದರಾಗಿ ನಿವೃತ್ತರಾಗಿದ್ದು, ಈಗಲೂ ಅಭಿನಯಿಸುವುದರ ಜತೆಗೆ, ನಾಟಕಗಳನ್ನು ನಿರ್ದೇಶಿಸುತ್ತಿದ್ದಾರೆ.

    ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ ಪ್ರಶಾಂತ ಹಿರೇಮಠ ಮೂಲತಃ ಗದಗ ಜಿಲ್ಲೆಯವರು. ಧಾರವಾಡದಲ್ಲಿ ಇಂಜಿನಿಯರಿಂಗ್ ಓದುತ್ತಿರುವಾಗಲೇ ರಂಗಭೂಮಿ, ಸಿನಿಮಾ, ಸಾಹಿತ್ಯ ಮತ್ತು ಸಂಗೀತದ ಗೀಳು ಹಚ್ಚಿಕೊಂಡವರು. ಅದೇ ಸಂದರ್ಭದಲ್ಲಿ ಆರಂಭವಾದ ಮೈಸೂರು ರಂಗಾಯಣಕ್ಕೆ ಪದಾರ್ಪಣೆ ಮಾಡಿದರು. ಸಿ.ಬಸವಲಿಂಗಯ್ಯ, ಚಿದಂಬರರಾವ್ ಜಂಬೆ, ಸಿಜಿಕೆ, ಪ್ರಕಾಶ ಬೆಳವಾಡಿ, ಫ್ರಿಡ್ಜ್ ಬೆನಿವೀಟ್ಸ್‌ರಂತಹ ಅನೇಕ ರಂಗ ದಿಗ್ಗಜರ ನಿರ್ದೇಶನದಲ್ಲಿ ಪಳಗಿದವರು.

    ಚಂದ್ರಹಾಸ, ತಲೆದಂಡ, ಹ್ಯಾಮ್ಲೆಟ್, ಗೋರಾ, ಶೂದ್ರ ತಪಸ್ವಿ, ಪರ್ವ ಮುಂತಾದ ಅನೇಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ.

    ನಾಲ್ಕು ದಶಕಗಳಿಂದ ವೃತ್ತಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಲೇ ಅನೇಕ ಹವ್ಯಾಸಿ ರಂಗತಂಡಗಳು ಹಾಗೂ ಯುವರಂಗಾಭ್ಯಾಸಿಗಳಿಗೆ ನಟನೆಯ ಪಾಠ, ರಂಗಪ್ರೇರಣೆ, ಸ್ಫೂರ್ತಿ ಹಾಗೂ ಪ್ರೋತ್ಸಾಹಗಳನ್ನು ನೀಡುತ್ತ ಬಂದಿದ್ದಾರೆ. ನೂರಾರು ಬೀದಿನಾಟಕಗಳನ್ನು ಪ್ರದರ್ಶಿಸುವ ಮೂಲಕ ಸಾಕ್ಷರತಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಭಾರತದ ಖ್ಯಾತ ನಾಟಕಕಾರ ಮಹೇಶ್ ಎಲ್‌ಕುಂಚ್‌ವಾರ್ ಅವರ ಮರಾಠಿ ಭಾಷೆಯ ‘ಮಗ್ನ ತಳ್ಯಾಕಾಠಿ’ ಹಾಗೂ ‘ಯುಗಾಂತ’ ನಾಟಕಗಳನ್ನು ಪತ್ನಿ ಕೆ.ಆರ್.ನಂದಿನಿ ಜತೆಗೂಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಅನೇಕ ನಾಟಕಗಳಲ್ಲಿ ನಟನೆ, ಸಂಗೀತ, ನಿರ್ದೇಶನ ಮಾಡಿದ್ದಾರೆ.


    ಈ ಎಲ್ಲದರ ಪರಿಣಾಮವೇ ಇಂದಿನ ನಟ, ಸಂಗೀತ ನಿರ್ದೇಶಕ, ನಿರ್ದೇಶಕ ಪ್ರಶಾಂತ್ ಹಿರೇಮಠ ಆಗಿದ್ದು, ಇವರಿಗೆ ಈ ಬಾರಿಯ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ರಂಗ ಸಂಗಮ ಕಲಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts