ಐಸ್​ ಕ್ರೀಂ ಪಾರ್ಟಿ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಹೊಡೆದು ಕೊಂದರು: ಡಾಕ್ಟರ್​ ಆಗಬೇಕಿದ್ದವ ಜೈಲು ಸೇರಿದ

Ice cream murder
Published on

ನವದೆಹಲಿ: ಸಂತೋಷ ಅತಿಯಾದರೂ ಒಳ್ಳೆಯದಲ್ಲ. ಜಾಸ್ತಿ ನಕ್ಕರೆ ಅಳು ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ ಎನ್ನುತ್ತಾರೆ. ಅದಕ್ಕೆ ಸಾಕ್ಷಿಯೆನ್ನುವಂತೆ ಎಂಬಿಬಿಎಸ್​ ಪದವಿ ಪರೀಕ್ಷೆ ಮುಗಿಸಿದೆ ಎನ್ನುವ ಸಂತಸದಿಂದ ಬೀಗುತ್ತಿದ್ದ ಯುವಕನೊಬ್ಬ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಲಕ್ಷಯ್​ ಹೆಸರಿನ ಯುವಕ ಎಂಬಿಬಿಎಸ್​ನ ಕೊನೆಯ ವರ್ಷದ ಪರೀಕ್ಷೆ ಬರೆದಿದ್ದು, ಅದರ ಸಂತಸವನ್ನು ಹಂಚಿಕೊಳ್ಳುವ ಸಲುವಾಗಿ ಸಣ್ಣದೊಂದು ಪಾರ್ಟಿ ಮಾಡಲು ಹೊರಟಿದ್ದ. ಅದರಂತೆ ತನ್ನ ಅಣ್ಣ ಕರಣ್​ (29) ಮತ್ತು ಸ್ನೇಹಿತರಾದ ಧೀರಜ್​ ಮತ್ತು ಅವಿನಾಶ್​ ಜತೆ ಬುಧವಾರ ರಾತ್ರಿ ನಗರದ ರೋಹಿಣಿ ಸ್ಟ್ರೀಟ್​ನಲ್ಲಿರುವ ಐಸ್​ ಕ್ರೀಂ ಪಾರ್ಲರ್​ ಒಂದಕ್ಕೆ ತೆರಳಿದ್ದಾನೆ. ಅಲ್ಲಿ ಅಮಿತ್​ ಶರ್ಮಾ ಎನ್ನುವಾತ ತನ್ನ ಸ್ನೇಹಿತ ಮತ್ತು ಸೋದರ ಸಂಬಂಧಿಯೊಂದಿಗೆ ಐಸ್​ ಕ್ರೀಂ ತಿನ್ನುತ್ತಾ ಕುಳಿತಿದ್ದ. ಸಂತಸದ ಅಲೆಯಲ್ಲಿದ್ದ ಲಕ್ಷಯ್​ ತಮ್ಮ ಐಸ್​ ಕ್ರೀಂಗೆ ಹಣ ಪಾವತಿಸುವುದಷ್ಟೇ ಅಲ್ಲದೆ ಅಮಿತ್​ ಶರ್ಮಾ ತಂಡದ ಐಸ್​ ಕ್ರೀಂ ಬಿಲ್​ನ್ನು ಸಹ ಪಾವತಿಸುವುದಾಗಿ ತಿಳಿಸಿದ್ದಾನೆ. ನಾವು ತಿಂದಿರುವ ಐಸ್​ ಕ್ರೀಂಗೆ ನೀನೇಕೆ ಪಾವತಿ ಮಾಡುತ್ತೀಯ ಎಂದು ಅಲ್ಲಿ ಲಕ್ಷಯ್​ ಮತ್ತು ಅಮಿತ್​ ನಡುವೆ ಮಾತಿನ ಚಕಮಕಿ ನಡೆದಿದೆ. ಸಣ್ಣ ಪ್ರಮಾಣದ ಜಗಳವೂ ನಡೆದಿದೆ.

ಪದವಿ ಮುಗಿದ ಸಂತಸದಲ್ಲಿದ್ದ ನನ್ನ ಜೊತೆ ಜಗಳವಾಡಿದ ಅಮಿತ್​ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅದಾಗಲೇ ಲಕ್ಷಯ್​ ತೀರ್ಮಾನ ಮಾಡಿಬಿಟ್ಟಿದ್ದ. ಐಸ್​ ಕ್ರೀಂ ಪಾರ್ಲರ್​ನಲ್ಲಿ ತಣ್ಣಗಾದ ಜಗಳ ಮತ್ತೆ ಮಧ್ಯರಾತ್ರಿಯಲ್ಲಿ ಊರಿನ ಶಾಲೆಯ ಹತ್ತಿರ ಹೆಚ್ಚಾಗಿದೆ. ಅಮಿತ್​ಗೆ ಹೊಡೆಯುವುದಕ್ಕೆ ಸಿದ್ಧವಾಗಿ ಬಂದಿದ್ದ ಲಕ್ಷಯ್​ ಗ್ಯಾಂಗ್​ ಕೋಲುಗಳಿಂದ ಅಮಿತ್​ಗೆ ಹೊಡೆದಿದ್ದಾರೆ. ಅಮಿತ್​ನ ತಲೆಗೆ ಬಲವಾದ ಏಟು ಬಿದ್ದ ಕಾರಣ ಆತ ಮೃತನಾಗಿದ್ದಾನೆ.

ಅಮಿತ್​ನನ್ನು ಕೊಲೆ ಮಾಡಿದ ಆರೋಪಿಗಳ ಗ್ಯಾಂಗ್​ ಪೊಲೀಸರಿಗೆ ಸಿಗದಿರುವಂತೆ ತಲೆ ಮರೆಸಿಕೊಂಡಿತ್ತು. ಆದರೆ ಘಟನೆಯನ್ನು ಕಣ್ಣಾರೆ ಕಂಡ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮೀರತ್​ನ ಕಾಲೇಜಿನಲ್ಲಿ ಎಂಬಿಬಿಎಸ್​ ಪದವಿ ಮುಗಿಸಿರುವ ಲಕ್ಷಯ್​, ಮೋಟಾರ್​ ಸಂಸ್ಥೆಯಲ್ಲಿ ಸೇಲ್ಸ್​ ಎಕ್ಸಿಕ್ಯೂಟಿವ್​ ಆಗಿರುವ ಕರಣ್​ ಮತ್ತು ಧೀರಜ್​ ಹಾಗೂ ಆಟೋ ಸ್ಪೇರ್​ ಪಾರ್ಟ್ಸ್​ಗಳ ಅಂಗಡಿ ಇಟ್ಟುಕೊಂಡಿರುವ ಅವಿನಾಶ್​ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net