

ಹೈದರಾಬಾದ್: ತೆಲುಗು ಸೂಪರ್ಸ್ಟಾರ್ ಚಿರಂಜೀವಿ ಜತೆ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಮತ್ತೆ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಖಷಿಯಲ್ಲಿದ್ದ ಅಭಿಮಾನಿಗಳಿಗೆ ಸ್ವತಃ ತ್ರಿಶಾ ಅವರೇ ಶಾಕ್ ನೀಡಿದ್ದಾರೆ. ಚಿರಂಜೀವಿ ಅಭಿನಯದ "ಆಚಾರ್ಯ" ಸಿನಿಮಾದಿಂದ ಹೊರ ನಡೆದಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ತ್ರಿಶಾ ಆಚಾರ್ಯ ಚಿತ್ರದಿಂದ ಹೊರನಡೆಯಲು ಕಾರಣವೇನೆಂಬುದನ್ನು ವಿವರಿಸಿದ್ದಾರೆ. ಕೆಲವು ವಿಚಾರಗಳು ಮೊದಲೇ ಚರ್ಚೆ ಮಾಡಿದ್ದಕ್ಕಿಂತ ಭಿನ್ನವಾಗಿರುವುದು ನನ್ನ ಅರಿವಿಗೆ ಬಂದಿದೆ. ನಿರ್ಮಾಪಕರೊಂದಿಗಿನ ಕ್ರಿಯೇಟಿವ್ ವ್ಯತ್ಯಾಸದಿಂದಾಗಿ ಚಿರಂಜೀವಿ ಸರ್ ಸಿನಿಮಾದಿಂದ ಹೊರ ನಡೆಯುತ್ತಿದ್ದೇನೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ, ಆದಷ್ಟು ಬೇಗ ಹೊಸ ಯೋಜನೆಯೊಂದಿಗೆ ತೆಲುಗು ಪ್ರೇಕ್ಷಕರ ಎದುರು ಬರುತ್ತೇನೆಂದು ಹೇಳಿದ್ದಾರೆ.
2006ರಲ್ಲಿ ಬಿಡುಗಡೆಯಾದ ಎ.ಆರ್. ಮುರುದಾಸ್ ನಿರ್ದೇಶನದ ಸ್ಟಾಲಿನ್ ಚಿತ್ರದಲ್ಲಿ ತ್ರಿಶಾ ಹಾಗೂ ಚಿರಂಜೀವಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಲವು ವರ್ಷಗಳ ಬಳಿಕ ಆಚಾರ್ಯ ಚಿತ್ರದಿಂದ ತ್ರಿಶಾ ಮತ್ತು ಚಿರಂಜೀವಿ ಮತ್ತೆ ಒಂದಾಗುವ ಲಕ್ಷಣಗಳಿದ್ದವು. ಆದರೆ, ಇದೀಗ ತ್ರಿಶಾ ನಿರ್ಧಾರದಿಂದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಅಂದಹಾಗೆ ಆಚಾರ್ಯ ಸಿನಿಮಾವನ್ನು ಕೊನಿದೆಲಾ ಪ್ರೊಡಕ್ಷನ್ ಕಂಪನಿ ಮತ್ತು ಮ್ಯಾಟಿನಿ ಎಂಟರ್ಟೈನ್ಮೆಂಟ್ ನಿರ್ಮಾಣ ಮಾಡುತ್ತಿದ್ದು, ಕೊರಟಾಲ ಶಿವು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಮಣಿ ಶರ್ಮ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಸುಮಾರು 140 ಕೋಟಿ ರೂ. ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗಿದೆ. (ಏಜೆನ್ಸೀಸ್)