14 ತಿಂಗಳಿಂದ ಕಾಣೆಯಾಗಿದ್ದವ ಬಾವಿಯಲ್ಲಿ ಪ್ರತ್ಯಕ್ಷನಾದ !

well
Published on

ನಾಸಿಕ್: ಒಂದು ವರ್ಷಕ್ಕೂ ಹಿಂದೆ ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಕಾರಿನ ಡೆಲಿವರಿ ಕೊಡಲು ಹೊರಟವ ಮಾರ್ಗಮಧ್ಯದ ಬಾವಿಯೊಂದರಲ್ಲಿ ಕಾರಿನ ಸಮೇತ ಶವವಾಗಿ ಸಿಕ್ಕ ಘಟನೆ ನಾಸಿಕ್ ಜಿಲ್ಲೆಯಿಂದ ವರದಿಯಾಗಿದೆ. ಕಾರುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ 41 ವರ್ಷ ವಯಸ್ಸಿನ ಸಂಜಯ ಅಹಿರೆ ಎಂಬಾತನೇ ಆ ದುರ್ದೈವಿ.

ಜನವರಿ 30 ರ ಬೆಳಿಗ್ಗೆ ಸಿನ್ನರ್ ಪಟ್ಟಣದ ಪಂಚಲೆ-ಪಂಗ್ರಿ ರಸ್ತೆಯಲ್ಲಿರುವ 50 ಅಡಿ ಆಳದ ಬಾವಿಯಿಂದ ಹೊಲಕ್ಕೆ ನೀರು ಹಾಯಿಸುತ್ತಿದ್ದ ರೈತನ ಮಗ. ಆಗ ಮೋಟರ್ ನೀರು ಎಳೆಯದ ಕಾರಣ ಬಾವಿಯಲ್ಲಿ ಇಣುಕಿ ನೋಡಿದಾಗ ಅಲ್ಲಿ ಕಾರೊಂದು ಬಿದ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಿಂದಿನ ರಾತ್ರಿ ಅಪಘಾತ ನಡೆದಿರಬಹುದು ಎಂದು ಭಾವಿಸಿ ತನಿಖೆ ಆರಂಭಿಸಿದರು. ಆದರೆ ಕಾರನ್ನು ಕ್ರೇನಿನಿಂದ ಮೆಲೆತ್ತಿಸಿದಾಗ ಚಾಲಕನ ಸೀಟಿನಲ್ಲಿದ್ದ ಕೊಳೆತ ಶವ ನೋಡಿ ಆಘಾತವಾಯಿತು. ಕಾರಿನಲ್ಲಿ ಸಿಕ್ಕ ದಾಖಲೆಗಳಿಂದ ವಾಹನವು ಮಧ್ಯಪ್ರದೇಶದ ಇಂದೋರ್ ನಿವಾಸಿ ದಿನೇಶ್ ತಿವಾರಿ ಎಂಬುವರಿಗೆ ಸೇರಿದ್ದೆಂಬುದು ತಿಳಿಯಿತು. ಆನಂತರ 14 ತಿಂಗಳ ಹಿಂದೆ ನಡೆದ ಕತೆಯು ಬೆಳಕಿಗೆ ಬಂತು.

ಶಿತಿಜ್ ತಿವಾರಿ ಎಂಬುವರು ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡದ ವಾಕಡ್​ ಎಂಬ ಪ್ರದೇಶದಿಂದ ತಮ್ಮ ತಂದೆ ದಿನೇಶ್ ತಿವಾರಿಯವರ ಇಂದೋರ್ ಮನೆಗೆ ಮಾರುತಿ ಸ್ವಿಫ್ಟ್​ ಕಾರನ್ನು ಕಳುಹಿಸಬೇಕಿತ್ತು. ಈ ಕೆಲಸವನ್ನು ಒಪ್ಪಿಕೊಂಡ ಸಂಜಯ ನವೆಂಬರ್ 20 ಕ್ಕೆ ವಾಕಡ್​ನಿಂದ ಇಂದೋರಿಗೆ ಪ್ರಯಾಣ ಆರಂಭಿಸಿದ. ಅವನ ಫೋನ್ ಸ್ವಿಚ್ ಆಫ್ ಆಗಿದ್ದು, ಎರಡು ದಿನಗಳಾದರೂ ಇಂದೋರ್​ ತಲುಪದ ಕಾರಣ ಆತನ ಸಂಬಂಧಿಕರು ನವೆಂಬರ್ 22 ರಂದು ಪೊಲೀಸರ ಮೊರೆ ಹೋದರು. ಕಾರನ್ನು ಕದ್ದೊಯ್ದಿದ್ದಾನೆ ಎಂಬ ಅನುಮಾನದ ಮೇಲೆ ಶಿತಿಜ್ ತಿವಾರಿ ಕೂಡ ವಾಕಡ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಸಂಜಯನ ಮೊಬೈಲ್ ಫೋನಿನ ಕೊನೆಯ ಲೋಕೇಶನ್ ಆಧರಿಸಿ ಸಂಗಮ್ನೇರ್ ಮತ್ತು ನಾಶಿಕ್​ಗಳಲ್ಲಿ ಪೊಲೀಸರು ಹಲವು ಬಾರಿ ಪತ್ತೆ ಕಾರ್ಯ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಕಾರಿನ ಎಡಭಾಗದ ಟೈರ್ ಬರ್ಸ್ಟ್ ಆಗಿದ್ದು, ಅದರಿಂದಲೇ ವಾಹನದ ನಿಯಂತ್ರಣ ತಪ್ಪಿ ಕಾರು ಬಾವಿಗೆ ಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾವಿಯನ್ನು ಗ್ರಾಮಸ್ಥರು ಹೆಚ್ಚಾಗಿ ಉಪಯೋಗಿಸದ ಕಾರಣ ಈವರೆಗೆ ಕಾರನ್ನು ಯಾರೂ ನೋಡಿಲ್ಲ ಎಂದು ಸಿನ್ನರ್ ಪೊಲೀಸ್ ಅಧಿಕಾರಿ ಗೊರಖ್ ಬಾಲಕ್ ತಿಳಿಸಿದ್ದಾರೆ. ಸಂಜಯ ಅಹಿರೆ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಮಾಲೆಗಾವಿನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ಡಿಎನ್​ಎ ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಸಂಜಯನ ಕುಟುಂಬ ಆತನ ಅಂತ್ಯಕ್ರಿಯೆ ನಡೆಸಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net