ಸುಂದರಿಯರಿಂದ ಮಸಾಜ್ ಪಡೆಯಲು ಆಸೆ ಪಟ್ಟ... 55 ಲಕ್ಷ ರೂಪಾಯಿ ಕಳೆದುಕೊಂಡ !

mass
Published on

ದುಬೈ: ದುಬೈನಲ್ಲಿ ವಾಸಿಸುತ್ತಿರುವ ಭಾರತೀಯನೊಬ್ಬ ಸುಂದರ ಹುಡುಗಿಯರಿಂದ ಮಸಾಜ್ ಪಡೆಯುವ ಆಸೆಗೆ ಬಿದ್ದು, ಸುಮಾರು 55 ಲಕ್ಷ ರೂಪಾಯಿ ಹಣ ಕಳೆದುಕೊಂಡ ಘಟನೆಯನ್ನು ಗಲ್ಫ್ ನ್ಯೂಸ್​ ವರದಿ ಮಾಡಿದೆ. ಡೇಟಿಂಗ್ ಆ್ಯಪ್​ನಲ್ಲಿ ನಕಲಿ ಮಸಾಜ್ ಪಾರ್ಲರ್​ನ ಜಾಹೀರಾತು ಕಳಿಸಿ ವಂಚಿಸಿದ ಮೂವರು ನೈಜೀರಿಯಾದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಹಣ ಕಳೆದುಕೊಂಡ 33 ವರ್ಷ ವಯಸ್ಸಿನ ಮಹಾಶಯನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಅವನು ವಂಚನೆಗೊಳಗಾದ ವಿನೂತನ ವಿಧಾನವನ್ನು ವರದಿ ವಿವರಿಸಿದೆ. ಈ ಬಗೆಗೆ ದುಬೈ ಪೊಲೀಸರು ದಾಖಲಿಸಿರುವ ಮೊಕದ್ದಮೆಯನ್ನು ದುಬೈ ಕೋರ್ಟ್ ಆಫ್ ಫಸ್ಟ್ ಇನ್ಸ್​ಟೆನ್ಸ್ ವಿಚಾರಣೆ ನಡೆಸುತ್ತಿದೆ.

ನವೆಂಬರ್ 2020 ರಲ್ಲಿ ಟಿಂಡರ್ ಡೇಟಿಂಗ್ ಆ್ಯಪ್​ಅನ್ನು ಬಳಸುತ್ತಿದ್ದ ಗಂಡಸಿಗೆ ಸುಂದರ ಹುಡುಗಿಯರ ಚಿತ್ರವಿರುವ ಮಸಾಜ್ ಪಾರ್ಲರ್​ನ ಸಂದೇಶ ಬಂದಿದೆ. 200 ದಿರ್ಹಾಮ್ (3,950 ರೂಪಾಯಿ)ಗೆ ಬಾಡಿ ಮಸಾಜ್​ ನೀಡುವ ಈ ಜಾಹೀರಾತಿನಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾನೆ. ಅವರು ನೀಡಿದ ವಿವರದ ಪ್ರಕಾರ ದುಬೈನ ಅಲ್​ ರೇಫಾ ಪ್ರದೇಶದಲ್ಲಿರುವ ಅಪಾರ್ಟ್​ಮೆಂಟ್​ ಒಂದಕ್ಕೆ ಹೋಗಿದ್ದಾನೆ.

"ಒಳಗೆ ಹೋದಾಗ ನಾಲ್ಕು ಆಫ್ರಿಕನ್ ಮಹಿಳೆಯರಿದ್ದರು. ನನ್ನ ಮೊಬೈಲ್​ನಲ್ಲಿ ಬ್ಯಾಂಕ್ ಆ್ಯಪ್​ಅನ್ನು ತೆರೆದು ಹಣ ವರ್ಗಾಯಿಸುವಂತೆ ಹೇಳಿದರು. ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿದರು. ಕಪ್ಪಾಳಕ್ಕೆ ಹೊಡೆದರು" ಎಂದು ಸಂತ್ರಸ್ತನು ದೂರಿನಲ್ಲಿ ತಿಳಿಸಿದ್ದ. ಒಬ್ಬ ಮಹಿಳೆ ಆತನ ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ಎಟಿಎಂನಿಂದ 30 ಸಾವಿರ ದಿರ್ಹಾಮ್​(5,92,586 ರೂ.) ಡ್ರಾ ಮಾಡಿದ್ದಾಳೆ. ಆತನನ್ನು ಒಂದು ದಿನದ ಮಟ್ಟಿಗೆ ಅಪಾರ್ಟ್​ಮೆಂಟಲ್ಲೇ ಬಂಧಿಸಿಟ್ಟಿದ್ದ ಮಹಿಳೆಯರು, ಅವನ ಖಾತೆಯಿಂದ 250 ಸಾವಿರ ದಿರ್ಹಾಮ್​(49,38,319 ರೂ.) ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹೀಗೆ ಒಟ್ಟು 55,30,806 ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ.

"ನನ್ನ ಐಫೋನನ್ನೂ ಕಸಿದುಕೊಂಡ ಮೇಲೇ ನನ್ನನ್ನು ಅಪಾರ್ಟ್​ಮೆಂಟಿನಿಂದ ಹೊರಹೋಗಲು ಬಿಟ್ಟರು. ಆ ಕೂಡಲೇ ನಾನು ಬ್ಯಾಂಕಿಗೆ ವಿಚಾರ ತಿಳಿಸಿ, ಪೊಲೀಸರಿಗೆ ದೂರು ನೀಡಿದೆ" ಎಂದು ಆತ ವಿವರಿಸಿದ್ದಾನೆ. ತೀವ್ರ ತನಿಖೆಯ ನಂತರ, ಮೂವರು ಮಹಿಳೆಯರನ್ನು ಶಾರ್ಜಾದಿಂದ ಬಂಧಿಸಿರುವ ದುಬೈ ಪೊಲೀಸರು, ಮತ್ತೊಬ್ಬ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net