

ಭೋಪಾಲ್: ಲಾಕ್ಡೌನ್ ಅನೇಕರ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಎಷ್ಟೋ ಜನ ಮನೆ, ಕೆಲಸ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನನ್ನೇ ಕಳೆದುಕೊಂಡಿದ್ದು, ಪೂರ್ತಿ ಕುಟುಂಬ ನೆಮ್ಮದಿಯಿಂದ ದೂರಾಗಿದೆ.
ಮಧ್ಯಪ್ರದೇಶದ ಭೋಪಾಲ್ನ ಪಮರಿಯಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ರಿಂಕಿ ಹೆಸರಿನ ಮಹಿಳೆ ಬ್ರಿಜೇಶ್ ಹೆಸರಿನ ವ್ಯಕ್ತಿಗೆ ಐದು ವರ್ಷದ ಹಿಂದೆಯೇ ಮದುವೆಯಾಗಿದ್ದಳು. ಅವರಿಗೆ ಇಬ್ಬರು ಮಕ್ಕಳಿವೆ. ಬ್ರಿಜೇಶ್ ಲಾಕ್ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದಾನೆ. ಕೆಲಸ ಕಳೆದುಕೊಂಡು ಮಾನಸಿಕ ನೋವಿನಲ್ಲಿದ್ದ ಆತನನ್ನು ರಿಂಕಿ ತನ್ನ ತವರು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ತವರು ಮನೆಯಲ್ಲಿ ಎರಡು ತಿಂಗಳ ಕಾಲ ಅವರು ಸಂಸಾರ ನಡೆಸಿದ್ದಾರೆ. ಈ ಸಮಯದಲ್ಲಿ ಬ್ರಿಜೇಶ್ಗೆ ರಿಂಕಿಯ ತಂಗಿ ಸಲಿ(17) ಜತೆ ಪ್ರೀತಿ ಹುಟ್ಟಿದೆ. ತಂಗಿ ಜತೆ ಗಂಡ ಹೆಚ್ಚು ಸ್ನೇಹದಿಂದ ಇರುವುದನ್ನು ಕಂಡು ರಿಂಕಿ ಪ್ರಶ್ನಿಸಿದ್ದಕ್ಕೆ, ಸಲಿ ನನ್ನ ತಂಗಿಯಿದ್ದಂತೆ ಎಂದು ಸಮಜಾಯಿಷಿ ಕೊಟ್ಟಿದ್ದಾನೆ.
ಈ ರೀತಿ ನಾದಿನಿ ಜತೆ ಪ್ರೀತಿ ಬೆಳೆಸಿಕೊಂಡ ಬ್ರಿಜೇಶ್ ಕಳೆದ ಶನಿವಾರ ಸಲಿ ಜತೆ ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಕುಟುಂಬಸ್ಥರು ಕಾಣೆಯಾಗಿರುವ ದೂರನ್ನು ದಾಖಲಿಸಿದ್ದಾರೆ. ಇಬ್ಬರನ್ನು ಹುಡುಕಿದ ಪೊಲೀಸರು ಮೂರು ದಿನಗಳ ಹಿಂದೆ ಬ್ರಿಜೇಶ್ನನ್ನು ರಿಂಕಿ ಜತೆ ಅವರ ಮನೆಗೆ ಕಳುಹಿಸಿದ್ದು, ಸಲಿಯನ್ನು ಆಕೆಯ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಪ್ರೀತಿಯಿಂದ ದೂರಾದ ನೋವಿನಿಂದ ಸಲಿ ಶುಕ್ರವಾರ ವಿಷ ಸೇವಿಸಿದ್ದಾಳೆ. ತಕ್ಷಣ ಕುಟುಂಬಸ್ಥರ ಗಮನಕ್ಕೆ ಬಂದಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್)