

ಜೈಪುರ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತಾನೂ ದೇವರ ಅವತಾರ ಎಂದು ಹೇಳುತ್ತಾ ವೃದ್ಧೆಯೊಬ್ಬರನ್ನೂ ಅಮಾನುಷವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಉದಯ್ಪುರ ಜಿಲ್ಲೆಯ ಗೋಗುಂಡ ತಾಲ್ಲೂಕಿನ ಬುಡಕಟ್ಟು ಪ್ರದೇಶದಲ್ಲಿ ನಡೆದಿದೆ.
ಮೃತ ವೃದ್ಧೆಯನ್ನೂ ಕಲ್ಕಿ ಬಾಯಿ ಗಮೇತಿ(85) ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಪ್ರತಾಪ್ ಸಿಂಗ್(60) ಸೇರಿದಂತೆ ಪೊಲೀಸರೂ ನಾಲ್ವರನ್ನೂ ವಶಕ್ಕೆ ಪಡೆದಿದ್ಧಾರೆ. ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿ ಪ್ರತಾಪ್ ಸಿಂಗ್ ವೃದ್ಧೆಯ ಪಕ್ಕ ಕುಳಿತುಕೊಂಡೂ ತಾನೂ ಶಿವನ ಅನುಯಾಯಿ ಎಂದು ಹೇಳುತ್ತಾನೆ. ಬಳಿಕ ನೀನೂ ಮಹಾರಾಣಿಯ ತರಹ ಕಾಣಿಸುತ್ತೀಯಾ ಎಂದು ಹೇಳುತ್ತಾ ಏಕಾಏಕಿ ಆಕೆಯ ಮೇಲೆ ಛತ್ರಿಯಿಂದ ಹಲ್ಲೆ ಮಾಡುತ್ತಾನೆ.
ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರೂ ಆತನನ್ನೂ ತಡೆದರೂ ಸುಮ್ಮನಾಗದ ಆರೋಪಿ ವೃದ್ಧೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಾನೆ. ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆ ಕುಸಿದು ಬಿದ್ದರೂ ಬಿಡದ ಆರೋಪಿ ಅವರ ತಲೆ ಭಾಗಕ್ಕೆ ಬಲವಾಗಿ ಹೊಡೆದು ಹತ್ಯೆ ಮಾಡುತ್ತಾನೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭುವನ್ ಭೂಷಣ್ ಆರೋಪಿ ಪ್ರತಾಪ್ ಸಿಂಗ್ ಕುಡಿದ ಮತ್ತಿನಲ್ಲಿ ತಾನೂ ದೇವರ ಅವತಾರ ಎಂದು ಹೇಳುತ್ತಾ ಕೃತ್ಯ ಎಸಗಿದ್ದಾನೆ. ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತ ವಯಸ್ಕರು, ಓರ್ವ ವ್ಯಕ್ತಿ ಸೇರಿದಂತೆ ನಾಲ್ವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.