ಬೆಂಗಳೂರು: ನಮ್ಮ ಮಟ್ರೋ ರೈಲಿನ ಹಳಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಸಂದ್ರ-ರೇಷ್ಮೆ ಸಂಸ್ಥೆಯ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ನಡೆದಿದೆ.
ಶನಿವಾರ ಸಂಜೆ 5:45ಕ್ಕೆ ಘಟನೆ ನಡೆದಿದ್ದು, ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ವ್ಯಕ್ತಿ ಟ್ರ್ಯಾಕ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಯಲಚೇನಹಳ್ಳಿ ನಿಲ್ದಾಣದಿಂದ ರೇಷ್ಮೆ ಸಂಸ್ಥೆ ಕಡೆಗೆ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ. ಮೃತ ಯುವಕನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯನಿಗೆ ಕೋಚ್ ಹುದ್ದೆ ಆಫರ್ ಮಾಡಿದ ಇಂಗ್ಲೆಂಡ್; ಮಾಜಿ ನಾಯಕನಿಗೆ ಸಿಕ್ತು ಬಂಪರ್ ಚಾನ್ಸ್
ಪ್ರಾಥಮಿಕ ಮಾಹಿತಿಯ ಪ್ರಕಾರ, 35 ವರ್ಷದ ವ್ಯಕ್ತಿಯೊಬ್ಬರು ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ 17.45 ಗಂಟೆಗೆ ಸಮೀಪಿಸುತ್ತಿರುವ ರೈಲಿನ ಮುಂದೆ ಜಿಗಿದಿದ್ದಾರೆ. ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ, ಉಳಿದ ಮಾರ್ಗದಲ್ಲಿ ಸೇವೆಗಳು ಲಭ್ಯವಿದೆ ಎಂದು BMRCL ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಥಳಕ್ಕೆ ಕೋಣನಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ.
ಐದನೇ ಘಟನೆ
ಈ ವರ್ಷ ಮೆಟ್ರೊ ಹಳಿಗೆ ಹಾರಿದ ಐದನೇ ಘಟನೆ ಇದಾಗಿದೆ. ಮಾರ್ಚ್‌ನಲ್ಲಿ ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ಯುವಕನೊಬ್ಬ ಹಾರಿ ಜೀವ ಕಳೆದುಕೊಂಡಿದ್ದ. ಜನವರಿಯಲ್ಲಿ ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕೇರಳದ ಯುವಕ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಇಂದಿರಾನಗರ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕೆಳಗೆ ಬಿದ್ದ ಮೊಬೈಲ್ ಎತ್ತಿಕೊಳ್ಳಲು ಹಳಿಗೆ ಹಾರಿದ್ದರು. ಜೂನ್‌ನಲ್ಲಿ ಹೊಸಹಳ್ಳಿ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ಇದಲ್ಲದೇ ಎರಡು ದಿನಗಳ ಹಿಂದೆ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಆಯ ತಪ್ಪಿ ಹಳಿಗೆ ಬಿದ್ದಿದ್ದು, ಬಿಎಂಆರ್‌ಸಿಎಲ್ ಸಿಬ್ಬಂದಿ ರಕ್ಷಿಸಿದ್ದರು.