ವಯನಾಡು: 320ಕ್ಕೂ ಅಧಿಕ ಜನರನ್ನು ಬಲಿ ಪಡೆದ ವಯನಾಡು ಭೂಕುಸಿತಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮಣ್ಣಿನಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಪಡೆಗಳು, ಸ್ಥಳೀಯ ಪೊಲೀಸರು ಮತ್ತು ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ರಾತ್ರಿ ಹಗಲೆನ್ನದೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಸಂತ್ರಸ್ತರ ರಕ್ಷಣೆಗೆ ಧಾವಿಸುತ್ತಿದ್ದು, ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ ಕಾರ್ಯ ಎಲ್ಲರ ಗಮನ ಸೆಳೆಯುತ್ತಿದೆ.
ವಯನಾಡಿನ ಮುಂಡಕ್ಕೈ, ಚೂರಲ್‌ಮಲ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ ಬಳಿಕ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ಆರು ಮಂದಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅರಣ್ಯಾಧಿಕಾರಿ ಕೆ.ಹಶಿಸ್ ನೇತೃತ್ವದ ನಾಲ್ವರು ಸದಸ್ಯರ ತಂಡವು ಒಂದೇ ಕುಟುಂಬದ ಆರು ಮಂದಿಯನ್ನು ರಕ್ಷಿಸಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಜುಲೈ 30ರಂದು ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದ ಬಳಿಕ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಗುಯೊಂದರಲ್ಲಿ ಸಿಲುಕಿದ್ದರು. ಈ ವಿಚಾರ ತಿಳಿದ ಕೇರಳ ಅರಣ್ಯ ಇಲಾಖೆಯ ಅಧಿಕಾರಿಗಳು ಒಂದರಿಂದ ನಾಲ್ಕು ವರ್ಷದೊಳಗಿನ ನಾಲ್ಕು ಮಕ್ಕಳನ್ನು ಒಳಗೊಂಡ ಬುಡಕಟ್ಟು ಕುಟುಂಬವನ್ನು ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆಗೆ ನಾಲ್ಕೂವರೆ ಗಂಟೆಗಳ ಕಾಲ ಸಮಯ ತೆಗೆದುಕೊಂಡಿದ್ದು, ಈ ಕುಟುಂಬವು ವಯನಾಡಿನ ಪಣಿಯಾ ಸಮುದಾಯದ್ದಾಗಿದ್ದು, ಆಳವಾದ ಕಮರಿಯ ಮೇಲಿರುವ ಬೆಟ್ಟದ ಮೇಲಿರುವ ಗುಹೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮಳೆಯ ಪ್ರಮಾಣ ಹೆಚ್ಚಾದಂತೆ ಅರಣ್ಯ ಇಲಾಖೆಯು ವಯನಾಡ್‌ನಲ್ಲಿರುವ ಬಹುತೇಕ ಬುಡಕಟ್ಟು ಸಮುದಾಯದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಇದನ್ನೂ ಓದಿ: PSI ಅನುಮಾನಾಸ್ಪದ ಸಾವು ಪ್ರಕರಣ; ತನಿಖೆ ನಂತರ ಸತ್ಯಾಂಶ ಬಯಲಾಗಲಿದೆ ಎಂದ ಗೃಹಸಚಿವರು
ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿ ಹಶಿನ್, ಬುಡಕಟ್ಟು ಜನಾಂಗದವರು ಇದ್ದ ಜಾಗಕ್ಕೆ ಹೋಗುವ ರಸ್ತೆ ಅಕ್ಷರಶಃ ಕಡಿದಾದ ಇಳಿಜಾರಿನಿಂದ ಕೂಡಿತ್ತು. ಒಂದೆಡೆ ಮಳೆ, ಜಾರುವ ಬಂಡೆಗಳು. ಅಧಿಕಾರಿಗಳು ಮರ ಮತ್ತು ಬಂಡೆಗಳಿಗೆ ಹಗ್ಗಗಳನ್ನು ಕಟ್ಟಿ ಹೆಜ್ಜೆಯಿಡುತ್ತಾ ಅಲ್ಲಿಗೆ ಹೋಗಿದ್ದರು. ಅದು ಅಪಾಯಕಾರಿಯೂ ಆಗಿತ್ತು. ಮಕ್ಕಳು ದಣಿದಿದ್ದರು. ನಾವು ಹೊತ್ತೊಯ್ದಿದ್ದ ಆಹಾರವನ್ನು ಅವರಿಗೆ ನೀಡಿದ್ದೇವೆ. ನಂತರ, ಬಹಳ ಮನವೊಲಿಕೆಯ ನಂತರ, ಅವರ ತಂದೆ ನಮ್ಮೊಂದಿಗೆ ಬರಲು ಒಪ್ಪಿದರು. ನಾವು ಮಕ್ಕಳನ್ನು ನಮ್ಮ ದೇಹಕ್ಕೆ ಬಟ್ಟೆಯಿಂದ ಕಟ್ಟಿ ಆ ಬೆಟ್ಟ ಇಳಿದಿದ್ದೇವೆ ಎಂದು ಅಧಿಕಾರಿ ಕಾರ್ಯಾಚರಣೆಯ ಕುರಿತು ಹೇಳಿದ್ದಾರೆ.
ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳ ಕಡಿದಾದ ದಾರಿಯಲ್ಲಿ ಸಾಗಿ 8 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಗುಹೆಯಲ್ಲಿ ಸಿಲುಕಿದವರನ್ನು ಕಾಪಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಶ್ಲಾಘಿಸಿದ್ದಾರೆ. ಭೂಕುಸಿತ ಪೀಡಿತ ವಯನಾಡಿನಲ್ಲಿ ನಮ್ಮ ಧೈರ್ಯಶಾಲಿ ಅರಣ್ಯ ಅಧಿಕಾರಿಗಳು ದಣಿವರಿಯದ 8 ಗಂಟೆಗಳ ಕಾರ್ಯಾಚರಣೆಯ ನಂತರ ಆರು ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ. ಈ ದುರಿತ ಕಾಲದಲ್ಲಿ ಅವರ ಸಾಹಸದ ಕಾರ್ಯಗಳು ಕೇರಳ ಮತ್ತೆ ಪುಟಿದೇಳಬಹುದು ಎಂಬುದನ್ನು ತೋರಿಸುತ್ತದೆ. ಒಗ್ಗಟ್ಟಾಗಿ ನಾವು ಪುನರ್ನಿರ್ಮಾಣ ಮಾಡುತ್ತೇವೆ. ಮತ್ತಷ್ಟು ಶಕ್ತಿಶಾಲಿಯಾಗಿ ಎದ್ದು ನಿಲ್ಲುತ್ತೇವೆ ಎಂಬ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ.