ಹಣಕ್ಕಾಗಿ ಹುಟ್ಟುಅಂಧ ಸ್ನೇಹಿತನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ; ಅಪರಾಧಿಗೆ ಜೀವಾವಧಿ ಶಿಕ್ಷೆ, ಒಂದು ಲಕ್ಷ ರೂ. ದಂಡ..

Court Order
Published on

ಹುಬ್ಬಳ್ಳಿ: ಹಣದ ಆಸೆಗಾಗಿ ಅಂಧ ಸ್ನೇಹಿತನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1,00,000 ರೂ. ದಂಡ ವಿಧಿಸಿ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.

ಗದಗ ಜಿಲ್ಲೆ ನರಗುಂದ ತಾಲೂಕು ಶಿರೋಳ ಗ್ರಾಮದ ನಿವಾಸಿ ಬಸವರಾಜ ಜಿಗಳೂರ ಶಿಕ್ಷೆಗೀಡಾದ ಅಪರಾಧಿ. ನವಲಗುಂದ ತಾಲೂಕಿನ ಮೊರಬ ಗ್ರಾಮದ ಜಗದೀಶ ಶಿರಗುಪ್ಪಿ ಹತ್ಯೇಗಿಡಾಗಿದ್ದ ಸ್ನೇಹಿತ.

ಹುಟ್ಟು ಅಂಧನಾಗಿದ್ದ ಜಗದೀಶ ಶಿರಗುಪ್ಪಿ ಗದಗ ಜಿಲ್ಲಾಸ್ಪತ್ರೆಯಲ್ಲಿ ಅಟೆಂಡರ್​ ಆಗಿದ್ದ. ತಮ್ಮ ಪಗಾರದ ಬಾಕಿ (ಅರಿಯರ್ಸ್​) 1,50,000 ರೂ. 2015ರಲ್ಲಿ ಗದಗಿನ ಕಾರ್ಪೋರೇಷನ್​​ ಬ್ಯಾಂಕ್​ ಖಾತೆಗೆ ಜಮೆಯಾಗಿತ್ತು. ಮೇ 22, 2015ರಂದು ಸ್ನೇಹಿತ ಬಸವರಾಜ ಜಿಗಳೂರ ಜತೆಗೆ ಸಹಾಯಕ್ಕೆಂದು ಬ್ಯಾಂಕ್​ಗೆ ಕರೆದುಕೊಂಡು ಹೋಗಿ ಹಣ ಬಿಡಿಸಿಕೊಂಡು ಬಂದಿದ್ದ. ಈ ಹಣವನ್ನು ಧಾರವಾಡದ ತನ್ನ ಸ್ನೇಹಿತನಿಗೆ ಕೊಡಬೇಕು. ನನ್ನ ಜತೆ ನೀನು ಬಾ ಎಂದು ಹೇಳಿದ್ದ. ಹಣದ ಆಸೆಗಾಗಿ ಬಸವರಾಜ ಸ್ನೇಹಿತ ಜಗದೀಶನನ್ನು ಕೊಲೆ ಮಾಡಲು ಹೊಂಚು ಹಾಕಿದ್ದ. ಅದಕ್ಕಾಗಿ ಗದಗಿನ ಗ್ರೇನ್​ ಮಾರ್ಕೆಟ್​​ನ ಹಾರ್ಡವೇರ್​ ಅಂಗಡಿಯಲ್ಲಿ ಮಚ್ಚು ಖರೀದಿಸಿದ್ದ.

ಮೇ 23, 2015ರಂದು ಜಗದೀಶನನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದ. ಬಳಿಕ ಉಪಾಯದಿಂದ ರಾತ್ರಿ ಉಣಕಲ್​ ಸಿದ್ದಪ್ಪಜ್ಜನ ಗುಡಿ ಹಿಂದೆ ಕರೆದುಕೊಂಡು ಬಂದಿದ್ದ. ನಂತರ ತಾನು ತಂದಿದ್ದ ಮಚ್ಚಿನಿಂದ ಜಗದೀಶನ ತಲೆ, ಮೈ ಕೈಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿ, 1,40,000 ರೂ. ಕಿತ್ತುಕೊಂಡು ಪರಾರಿಯಾಗಿದ್ದ. ಗಾಯಾಳುವನ್ನು ಸ್ಥಳೀಯರು ಕಿಮ್ಸ್​ಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಜಗದೀಶ ಮೃತಪಟ್ಟಿದ್ದ.

ಈ ಬಗ್ಗೆ ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇದರಲ್ಲಿ 90 ಸಾವಿರ ರೂ. ಮೃತ ಜಗದೀಶನ ತಾಯಿಗೆ ಹಾಗೂ 10 ಸಾವಿರ ರೂ. ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಭರಿಸಲು ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್​. ತಮ್ಮಿನಾಳ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net