

ಮುಂಬೈ: ಅಪ್ಪ ಅಮ್ಮನಿಗೆ ತಮ್ಮ ಬೈದ ಎನ್ನುವ ಕಾರಣಕ್ಕೆ ಆತನನ್ನೇ ಕೊಲೆ ಮಾಡಿದ್ದ ಅಣ್ಣನಿಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ನಾಲ್ಕು ವರ್ಷಗಳ ಹಿಂದಿನ ಪ್ರಕರಣಕ್ಕೆ ಇದೀಗ ತೀರ್ಪು ಸಿಕ್ಕಿದೆ.
ಸುನಿಲ್ ತನ್ನ ಅಪ್ಪ ಅಮ್ಮ ಹಾಗೂ ತಮ್ಮ ಆಕಾಶ್ ಜತೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿದ್ದ. ಆಗಿನ್ನೂ 19 ವರ್ಷದವನಾಗಿದ್ದ ಆಕಾಶ್ ಮದ್ಯಪಾನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದನಂತೆ. ಪ್ರತಿದಿನ ಅಪ್ಪ ಅಮ್ಮ ಮತ್ತು ಅಣ್ಣನನ್ನು ಪೀಡಿಸಿ ಹಣ ತೆಗೆದುಕೊಂಡು ಹೋಗಿ ಕಂಠ ಪೂರ್ತಿ ಕುಡಿದು ಮನೆಗೆ ಬರುತ್ತಿದ್ದನಂತೆ. ಹಣ ಕೊಡದಿದ್ದರೆ ಎಲ್ಲರ ಮೇಲೂ ರೇಗಾಡುತ್ತಿದ್ದನಂತೆ.
ಅದೇ ರೀತಿ ಆ ದಿನವೂ ಆಗಿದೆ. ಆಕಾಶ್ ತಾಯಿಯ ಬಳಿ ಬಂದು 500 ರೂಪಾಯಿ ಕೇಳಿದ್ದಾನೆ. ಆಕೆ ಕೊಡಲು ನಿರಾಕರಿಸಿದಾಗ ಸಿಟ್ಟಿನಿಂದ ಮನೆಯಿಂದ ಹೊರಗೆ ಹೋಗಿದ್ದಾನೆ. ಮತ್ತೆ ಮನೆಗೆ ಬಂದು ಸುನಿಲ್ ಬಳಿ 2000 ಕ್ಕೆ ಬೇಡಿಕೆ ಇಟ್ಟಿದ್ದಾನೆ. ಅದಾಗಲೇ ಆತನ ಮೇಲೆ ಸಿಟ್ಟಾಗಿದ್ದ ಸುನಿಲ್ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯವಾಗಿದ್ದರಿಂದಾಗಿ ಆಕಾಶ್ ಪ್ರಾಣ ಬಿಟ್ಟಿದ್ದ. ಆ ಪ್ರಕರಣದ ತೀರ್ಪು ಇದೀಗ ಬಂದಿದ್ದು, ಅಪರಾಧಿಗೆ ಜೈಲು ಶಿಕ್ಷೆ ಜತೆಗೆ ದಂಡ ವಿಧಿಸಲಾಗಿದೆ. (ಏಜೆನ್ಸೀಸ್)