

ಶಿವಮೊಗ್ಗ: ಲಾಕ್ಡೌನ್ನಿಂದಾಗಿ ಅನೇಕ ಮದುವೆ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ. ಇದೀಗ ಶಾಸಕ ಕುಮಾರ ಬಂಗಾರಪ್ಪ ಅವರ ಮಗಳ ಮದುವೆಯನ್ನೂ ಮುಂದೂಡಿರುವ ವಿಚಾರ ಹೊರಬಿದ್ದಿದೆ.
ಅಂದ ಹಾಗೆ ಕುಮಾರ್ ಬಂಗಾರಪ್ಪ ಅವರ ಮಗಳು ಲಾವಣ್ಯಳಿಗೆ ಹೈದರಾಬಾದ್ ಮೂಲದ ಡಾ. ವಿಕ್ರಮಾಧಿತ್ಯ ಅಥೆಲಿ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಮೇ 30ಕ್ಕೇ ಮದುವೆ ನಡೆಯಬೇಕಿತ್ತು. ಅದೇ ದಿನ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆಯನ್ನೂ ಇಟ್ಟುಕೊಳ್ಳಲಾಗಿತ್ತು. ಹಾಗೆಯೇ ಜೂನ್ 4ಕ್ಕೆ ಸೊರಬದ ಎಸ್ ಬಂಗಾರಪ್ಪ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನು ನಡೆಸುವುದಾಗಿ ಹೇಳಲಾಗಿತ್ತು. ಮದುವೆ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿತ್ತು. ಆದರೆ ಲಾಕ್ಡೌನ್ ವಿಸ್ತರಣೆ ಆದ ಕಾರಣ ಮದುವೆಯನ್ನು ಮುಂದೂಡಲಾಗಿದೆ.
ಸದ್ಯ ಸ್ವಕ್ಷೇತ್ರದಲ್ಲಿರುವ ಕುಮಾರ ಬಂಗಾರಪ್ಪ ಕ್ಷೇತ್ರದ ಸೋಂಕಿತರಿಗೆ ಸೌಲಭ್ಯ ಮಾಡಿಕೊಡುವಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಕೋವಿಡ್ ಕೇಂದ್ರಗಳನ್ನು ನಿರ್ಮಿಸಿಕೊಂಡು ಸೋಂಕಿತರಿಗೆ ಸಕಲ ಸೌಲಭ್ಯ ನೀಡಲಾಗುತ್ತಿದೆ. ಶಾಸಕರ ಕಾರ್ಯಕ್ಕೆ ಕ್ಷೇತ್ರದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)