ಕೇಂದ್ರ ಸಚಿವರ ಮನೆಯಲ್ಲಿ ಮೃತದೇಹ ಪತ್ತೆ! ಘಟನಾ ಸ್ಥಳದಲ್ಲಿದ್ದ ಬಂದೂಕು ಯಾರದ್ದು?

sib
Published on

ನವದೆಹಲಿ: ಲಖನೋದ ಠಾಕೂರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಗರಿಯಾ ಖಾಲ್ ಪ್ರದೇಶದಲ್ಲಿರುವ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಕುಟುಂಬ ಮನೆಯಲ್ಲಿ 30 ವರ್ಷದ ವಿನಯ್ ಶ್ರೀವಾಸ್ತವ ಶುಕ್ರವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ.

ಮೃತ ವ್ಯಕ್ತಿ, ಸಚಿವ ಕೌಶಲ್ ಕಿಶೋರ್ ಅವರ ಪುತ್ರ ವಿಕಾಸ್ ಕಿಶೋರ್ರ ಸ್ನೇಹಿತ ಎಂದು ಹೇಳಲಾಗಿದೆ. ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾದ ಪಿಸ್ತೂಲ್ ಪರವಾನಗಿ ಕೂಡ ಸಚಿವರ ಮಗನ ಹೆಸರಿನಲ್ಲಿದೆ ಎಂದು ಹೇಳಲಾಗಿದೆ.

"ಮೃತನ ಸಹೋದರ ವಿಕಾಸ್ ಶ್ರೀವಾಸ್ತವ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ" ಎಂದು ದಕ್ಷಿಣ ಜಿಲ್ಲೆಯ ಉಪ ಪೊಲೀಸ್ ಆಯುಕ್ತ ರಾಹುಲ್ ರಾಜ್ ತಿಳಿಸಿದ್ದಾರೆ. "ಯುವಕನ ತಲೆಯ ಮೇಲೆ ಗಾಯದ ಗುರುತುಗಳಿದ್ದು ಘಟನಾ ಸ್ಥಳದಲ್ಲಿ ಪಿಸ್ತೂಲ್ ಕೂಡ ಪತ್ತೆಯಾಗಿದೆ" ಎಂದು ಉಪಪೊಲೀಸ್ ಆಯುಕ್ತರು ಹೇಳಿದ್ದು ಜತೆಗೆ ಪಿಸ್ತೂಲ್ ಸಚಿವರ ಮಗ ಕಿಶೋರ್ಗೆ ಸೇರಿದ್ದು ಎಂದು ಮಾಹಿತಿ ನೀಡಿದರು. ಪ್ರಕರಣ ನಡೆದದ್ದು ಹೇಗೆ, ಯಾಕೆ, ಯಾರು ಕೊಲೆ ಮಾಡಿದ್ದು ಮುಂತಾದ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

"ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ತಲುಪಿ ಪರವಾನಗಿ ಪಡೆದ ರಿವಾಲ್ವರ್ಅನ್ನೂ ತಂಡ ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದೆ" ಎಂದು ಡಿಸಿಪಿ ಮಾಹಿತಿ ನೀಡಿದರು.

ಪ್ರಾಥಮಿಕ ತನಿಖೆಯಲ್ಲಿ ಕನಿಷ್ಠ ಆರು ಜನರು ಗುರುವಾರ ರಾತ್ರಿ ಸಚಿವರ ಮಗನ ಮನೆಗೆ ಬಂದು ತಡರಾತ್ರಿಯವರೆಗೆ ಪಾರ್ಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಂತರ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವುದಾಗಿ ಡಿಸಿಪಿ ಹೇಳಿದರು.

ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರಾಗಿರುವ ಕಿಶೋರ್ ಅವರ ಪ್ರಕಾರ, ಘಟನೆ ನಡೆದಾಗ ಅವರ ಮಗ ಮನೆಯಲ್ಲಿ ಇರಲಿಲ್ಲ. ತನ್ನ ಮಗ ಗುರುವಾರದಿಂದ ದೆಹಲಿಯಲ್ಲಿದ್ದು, ಶೀಘ್ರದಲ್ಲೇ ಲಖನೋ ತಲುಪಲಿದ್ದಾನೆ ಎಂದು ಕೌಶಲ್ ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net